ರವೀಂದ್ರ ಜಡೇಜಾ ಅವರ ಆಲ್ ರೌಂಡರ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಇನಿಂಗ್ಸ್ ಮತ್ತು 200 ರನ್ ಗಳ ಭಾರೀ ಅಂತರದಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಟೆಸ್ಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ 400 ರನ್ ಗಳ ಹಿನ್ನಡೆಯೊಂದಿಗೆ ಫಾಲೋಆನ್ ಗೆ ಗುರಿಯಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ 178 ರನ್ ಗಳಿಗೆ ಪತನಗೊಂಡಿತು.
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಗೆ 544 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡರೆ, ಶ್ರೀಲಂಕಾ ತಂಡ ಮೊದಲ ಇನಿಂಗ್ಸ್ ನಲ್ಲಿ 174 ರನ್ ಗಳಿಗೆ ಆಲೌಟಾದರೆ, ಎರಡನೇ ಇನಿಂಗ್ಸ್ ನಲ್ಲಿ 178 ರನ್ ಗಳಿಗೆ ಪತನಗೊಂಡಿತು.
ಗಾಯದಿಂದ ಚೇತರಿಸಿಕೊಂಡ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ ಬೆನ್ನಲ್ಲೇ ಅಮೋಘ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಜೀವನಶ್ರೇಷ್ಠ 175 ರನ್ ಸಿಡಿಸಿದ್ದೂ ಅಲ್ಲದೇ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆರ್.ಅಶ್ವಿನ್ 4 ವಿಕೆಟ್ ಗಳಿಸಿದರು.
ಶ್ರೀಲಂಕಾ ಪರ ನಿರೋಶನ್ ಡಿಕ್ವೆಲಾ ಅಜೇಯ 51 ರನ್ ಬಾರಿಸಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.