ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಇಳಿಯುವ ಸೂಚನೆ ನೀಡಿದ್ದು, ಕಳೆದ 24 ಗಂಟೆಯಲ್ಲಿ 3.43 ಲಕ್ಷ ಮಂದಿಗೆ ಪಾಸಿಟಿವ್ ದೃಢಪಟ್ಟರೆ, 3994 ಮಂದಿ ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 5 ರಾಜ್ಯಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ 42,582, ಕೇರಳದಲ್ಲಿ 39,955, ಕರ್ನಾಟಕದಲ್ಲಿ 35,297 ಮತ್ತು ತಮಿಳುನಾಡಿನಲ್ಲಿ 30,621 ಪ್ರಕರಣಗಳು ನಿನ್ನೆ ವರದಿಯಾಗಿದ್ದವು.
ಕಳೆದ 24 ಗಂಟೆಯಲ್ಲಿ 3,43,144 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 3,44,776 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,40,46,809ಕ್ಕೆ ಏರಿಕೆಯಾಗಿದ್ದು, ಗುಣಮುಖಿತರ ಸಂಖ್ಯೆ 2 ಕೋಟಿ (2,00,79,599) ಗಡಿ ದಾಟಿದೆ. ಸಾವಿನ ಸಂಖ್ಯೆ 2,62,317ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 37,04,893ಕ್ಕೆ ತಲುಪಿದೆ.