ಮಧ್ಯಮ ವೇಗಿ ಕ್ರಿಸ್ ಮೊರಿಸ್ ಮಾರಕ ದಾಳಿ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದೆ.
ಮುಂಬೈನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವನ್ನು 9 ವಿಕೆಟ್ ಗೆ 133 ರನ್ ಗಳಿಗೆ ಕಟ್ಟಿ ಹಾಕಿದ ರಾಜಸ್ಥಾನ್ ರಾಯಲ್ಸ್ 18 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ರಾಜಸ್ಥಾನ್ ಪರ ನಾಯಕನ ಆಟವಾಡಿದ ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 42 ರನ್ ಬಾರಿಸಿ ಔಟಾಗದೇ ಉಳಿದರೆ, ಡೇವಿಡ್ ಮಿಲ್ಲರ್ 23 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ ಅಜೇಯ 24 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ 22 ಮತ್ತು ಶಿವಂ ದುಬೆ 22 ರನ್ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ಕೆಕೆಆರ್ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರೆ, ಶಿವಂ ಮವಿ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆರ್ ಕ್ರಿಸ್ ಮೊರಿಸ್ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಸೋಲಿನೊಂದಿಗೆ ಕೆಕೆಆರ್ 5 ಪಂದ್ಯಗಳಿಂದ 1 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.