ಮದುವೆ ಸಮಾರಂಭದ ವೇಳೆ ಪಟಾಕಿ ಸಿಡಿಸಿದ್ದರಿಂದ ವಿಚಲಿತಗೊಂಡ ಆನೆ ಕಾರು ಕೆಡವಿ ದಾಂಧಲೆ ನಡೆಸಿದ್ದು, ಘಟನೆಯಿಂದ ಕಂಗಲಾದ ವರ ಪರಾರಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ವಿಭಾಗದಲ್ಲಿ ನಡೆದಿದೆ.
ಪ್ರಯಾಗ್ ರಾಜ್ ನ ಅಮಲಾಪುರ ಗ್ರಾಮದ ಸರನಿ ಇನಾಯತ್ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ವಿಚಲಿತಗೊಂಡ ಆನೆ ಮದುವೆ ಸಮಾರಂಭ ಪ್ರದೇಶವನ್ನು ಹಾಳುಗೆಡವಿದೆ.
ಮದುವೆ ಸಮಾರಂಭಕ್ಕೆ ಆನೆಯ ಜಜೊತೆ ವರ ಆನಂದ್ ತ್ರಿಪಾಠಿ ದಿಬ್ಬಣದಲ್ಲಿ ಆಗಮಿಸಿದರು. ಈ ವೇಳೆ ಪಟಾಕಿ ಹೊಡೆದಿದ್ದರಿಂದ ವಿಚಲಿತಗೊಂಡ ಆನೆ ಸಮಾರಂಭಕ್ಕೆ ಹಾಕಿದ್ದ ಪೆಂಡಾಲ್ ಹಾಳುಗೆಡವಿದ್ದಲ್ಲದೇ ಸಮೀಪದಲ್ಲಿದ್ದ ಕಾರಿನ ಮೇಲೆ ಹತ್ತಿ ನಜ್ಜುಗುಜ್ಜುಗೊಳಿಸಿತು.
ಆನೆಯ ವರ್ತನೆಯಿಂದ ಬೆಚ್ಚಿಬಿದ್ದ ಜನರು ಓಡಿ ಹೋದರೆ, ಮದುವೆ ಬಂದಿದ್ದಮದುಮಗ ಕೂಡ ಪರಾರಿಯಾಗಿದ್ದಾನೆ. ಕೊನೆಗೆ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಆನೆಯನ್ನು ಶಾಂತಗೊಳಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.