ನವದೆಹಲಿ: ಛತ್ತೀಸ್ಗಡದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ನಕ್ಸಲ್ ವಿರುದ್ಧದ ಕಾರ್ಯಾಚರಣೆ ದುರ್ಬಲ ಮತ್ತು ಕಳಪೆಯಾಗಿತ್ತು. ಹೀಗಾಗಿಯೇ 22 ಯೋಧರು ಹುತಾತ್ಮರಾಗಬೇಕಾಯಿತು.
ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಹೆಮ್ಮೆಯ ಯೋಧರು ಬಲಿಪಶುಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಸೋನಿಯಾ ಗಾಂಧಿ ಸಹ ಪ್ರತಿಕ್ರಿಯಿಸಿದ್ದು, ಹುತಾತ್ಮರಿಗೆ ಸಂತಾಪ ಸೂಚಿಸಿದ್ದಾರೆ.
ನಕ್ಸಲರ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ. ನಕ್ಸಲರ ವಿರುದ್ಧ ಹೋರಾಡುತ್ತಿರುವ ಅರೆಸೈನಿಕ ಪಡೆಗಳಿಗೆ ಛತ್ತೀಸಗಡದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಎಲ್ಲ ರೀತಿಯ ನೆರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಅಂತೆಯೇ ಎನ್ ಕೌಂಟರ್ ನಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಿರುವ ಸೋನಿಯಾ, ಮೃತ ಯೋಧರ ಕುಟುಂಬಗಳಿಗೆ ದೇವರು ಸಾವಿನ ನೋವು ತಡೆಯುವ ಶಕ್ತಿ ನೀಡಲಿ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.