ನಾಯಕ ಕೆ.ಎಲ್. ರಾಹುಲ್ ಮತ್ತು ಕ್ರಿಸ್ ಗೇಲ್ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 9 ವಿಕೆಟ್ ಗಳ ಭಾರೀ ಅಂತರದಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಸೋಲುಣಿಸಿದೆ.
ಚೆನ್ನೈನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್ ಗೆ 131 ರನ್ ಗಳಿಗೆ ನಿಯಂತ್ರಿಸಿದ ಪಂಜಾಬ್ 17.4 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಮೊದಲ ವಿಕೆಟ್ ಗೆ 53 ರನ್ ಜೊತೆಯಾಟ ನಿಭಾಯಿಸಿದರು. ಮಯಾಂಕ್ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 25 ರನ್ ಗಳಿಸಿ ಔಟಾದರು.
ಬ್ಯಾಟಿಂಗ್ ಮಾಡಲು ಕಷ್ಟವಾದ ಪಿಚ್ ನಲ್ಲಿ ತಾಳ್ಮೆಯಿಂದ ಆಡಿದ ರಾಹುಲ್ ಮತ್ತು ಗೇಲ್ ಮುರಿಯದ 2ನೇ ವಿಕೆಟ್ ಗೆ 79 ರನ್ ಜೊತೆಯಾಟ ನಿಭಾಯಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ರಾಹುಲ್ 52 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿ ಔಟಾಗದೇ ಉಳಿದರೆ, ಗೇಲ್ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 43 ರನ್ ಗಳಿಸಿ ಅಜೇಯರಾಗಿ ಉಳಿದರು.