ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನೀಡಿದ್ದ ಮನೆ, ಹಣವನ್ನು ವಾಪಸ್ ಕೇಳಿದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸೂರ್ತಿ ಗ್ರಾಮದ ಗಜಾನನ ನಾಯಕ (48) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ವಿದ್ಯಾಪಾಟೀಲ್ ಪರಾರಿಯಾಗಿದ್ದಾಳೆ.
ಗಜಾನನಗೆ 2 ಮದುವೆಯಾಗಿದ್ದು, ಇಬ್ಬರೂ ಪತ್ನಿಯರೂ ಆತನನ್ನು ಬಿಟ್ಟುಹೊಗಿದ್ದರು. ಗಜಾನನ 15 ವರ್ಷದ ಹಿಂದೆ 2ನೇ ಪತ್ನಿಯ ಮಗನ ಜೊತೆ ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದ.
ಬೇಕರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ವಿದ್ಯಾ ಪಾಟೀಲ್ ಜೊತೆ ಗಜಾನನ ಅನೈತಿಕ ಸಂಬಂಧ ಬೆಳೆಸಿದ್ದು, ಅವಳಿಗಾಗಿ 4 ವರ್ಷದ ಹಿಂದೆ ಮನೆ ಕಟ್ಟಿಸಿಕೊಟ್ಟು ಸಂಪಾದಿಸಿದ ಹಣ ಕೂಡ ಕೊಟ್ಟಿದ್ದರು.
ಗಜಾನನ ಕೊರೊನಾ ಕಾರಣದಿಂದ ವ್ಯಾಪಾರದಲ್ಲಿ ನಷ್ಟವಾಗಿ ಬೇಕರಿಯನ್ನು ಮಾರಾಟ ಮಾಡಿ, ರಿಯಲ್ ಎಸ್ಟೇಟ್ ಆರಂಭಿಸಿದ್ದ. ಬೇಕರಿ ಮುಚ್ಚಿದ್ದರಿಂದ ಗೋವಾಕ್ಕೆ ಹೋಗಿದ್ದ ವಿದ್ಯಾಳಿಂದ ಗಜಾನನ ತಾನು ನೀಡಿದ್ದ ಮನೆ ಹಾಗೂ ಹಣ ನೀಡುವಂತೆ ಕೇಳಿದ್ದ.
ಇದರಿಂದ ಕೋಪಗೊಂಡ ವಿದ್ಯಾ ಗಜಾನನನ್ನು ಕೊಲೆ ಮಾಡಿದ್ದಾಳೆ. ಜೊತೆಗೆ ಆತ ಪ್ರತಿದಿನ ಬರೆದಿಡುತ್ತಿದ್ದ ಡೈರಿ ಹಾಗೂ ಅವನ ಫೋನ್‍ನೊಂದಿಗೆ ಪರಾರಿಯಾಗಿದ್ದಾಳೆ ಎಂದು ಗಜಾನನ ಮಗ ಅವಧೂತ್ ಆರೋಪ ಮಾಡಿದ್ದಾನೆ. ಆರೋಪಿ ವಿದ್ಯಾಳ ಪತ್ತೆಗಾಗಿ ಶೋಧ ನಡೆಯುತ್ತಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.