ತೈಪೇ: ಇಲ್ಲೊಬ್ಬ ಒಬ್ಬಳನ್ನೇ ನಾಲ್ಕು ಬಾರಿ ಮದುವೆಯಾಗಿದ್ದಾನೆ. ಅದೇ ಹುಡುಗಿಗೆ ಮೂರು ಬಾರಿ ವಿಚ್ಛೇದನ ನೀಡಿರುವ ಈತ ಒಬ್ಬಳನ್ನೇ ನಾಲ್ಕು ಬಾರಿ ವಿವಾಹವಾದ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟೀ. ಇದು ತೈವಾನ್ನಲ್ಲಿ ನಡೆದ ವಿಚಿತ್ರವೆನ್ನಿಸುವಂಥ ಘಟನೆ.
ಸಂಬಳ ಸಹಿತ ರಜೆಗಾಗಿ ಈತ ಇಷ್ಟೆಲ್ಲ ಕಿತಾಪತಿ ಮಾಡಿದ್ದಾನೆ. ಬ್ಯಾಂಕ್ ಉದ್ಯೋಗಿಯಾಗಿರುವ ಈತ ಕಳೆದ ಏಪ್ರಿಲ್ನಲ್ಲಿ ಮೊದಲ ಬಾರಿ ಮದುವೆಯಾಗಿದ್ದ. ಈತ ಬ್ಯಾಂಕಿನಲ್ಲಿ ರಜೆಗೆ ಅರ್ಜಿ ಸಲ್ಲಿಸಿದ ವೇಳೆ ಬ್ಯಾಂಕ್ ಕೇವಲ 8 ದಿನಗಳ ರಜೆಯನ್ನ ಮಂಜೂರು ಮಾಡಿತ್ತು.
ಕಳೆದ ವರ್ಷ ಏಪ್ರಿಲ್ 6ರಂದು ವಿವಾಹವಾದ ಈತ ಆಕೆಗೆ ವಿಚ್ಚೇದನ ನೀಡಿದ್ದ. ಮಾರನೇ ದಿನವೇ ಬ್ಯಾಂಕಿನಲ್ಲಿ ಮತ್ತೊಮ್ಮೆ ರಜೆಗೆ ಅರ್ಜಿ ಸಲ್ಲಿಸಿ ಅದೇ ಯುವತಿಯನ್ನ ಮದುವೆಯಾದ. ಮತ್ತೆ ಡಿವೋರ್ಸ್ ನೀಡಿದ. ಹೀಗೆ ಆತ ನಾಲ್ಕು ಬಾರಿ ಒಂದೇ ಯುವತಿಯನ್ನ ಮದುವೆಯಾಗಿ ಆಕೆಗೆ ಮೂರು ಬಾರಿ ವಿಚ್ಛೇದನ ನೀಡಿದ್ದಾನೆ. ಈ ಪ್ಲಾನ್ನ ಮೂಲಕ ಆತ ಒಟ್ಟು 32 ದಿನಗಳ ರಜೆಯನ್ನ ಪಡೆದುಕೊಂಡಿದ್ದಾನೆ.
ಮೂರು ಬಾರಿ ವಿವಾಹವಾಗುವ ತನಕ ಎಲ್ಲವೂ ಸರಿ ಇತ್ತು. ಆದರೆ, ಇತ್ತ ಬ್ಯಾಂಕಿನವರಿಗೆ ಅನುಮಾನ ಶುರುವಾಗಿತ್ತು. ಹೀಗಾಗಿ, ಈತ ಯಾಕೆ ಹೀಗೆ ಮಾಡುತ್ತಿದ್ದಾನೆ ಎಂದು ತಿಳಿದುಕೊಂಡ ಬ್ಯಾಂಕ್ ಅಧಿಕಾರಿಗಳು ಮತ್ತೆ ನಾಲ್ಕನೇ ಮದುವೆಗೆ ಈತ ಹೆಚ್ಚುವರಿ ರಜೆ ಕೇಳಲು ಬಂದ ಈತನಿಗೆ ರಜೆ ನೀಡಲು ನಿರಾಕರಿಸಿದ್ದರು.
ಈತನ ರಜಾ ಅರ್ಜಿಯನ್ನ ನಿರಾಕರಿಸಿದ ಬಳಿಕ ಸುಮ್ಮನಾಗದ ಕ್ಲರ್ಕ್ ಬ್ಯಾಂಕ್ ವಿರುದ್ಧ ತೈಪೆ ಸಿಟಿ ಕಾರ್ಮಿಕ ಇಲಾಖೆಗೆ ದೂರನ್ನ ದಾಖಲಿಸಿದ. ಕಾರ್ಮಿಕ ರಜೆ ನಿಯಮಗಳ 2ನೇ ವಿಧಿಯನ್ನ ಬ್ಯಾಂಕ್ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
ಮದುವೆಯ ಕಾರಣಕ್ಕೆ ನೌಕರರು 8 ದಿನಗಳ ವೇತನ ಸಹಿತ ರಜೆಯನ್ನ ಪಡೆಯಲು ಅರ್ಹರಾಗಿರುತ್ತಾರೆ. ಹೀಗಾಗಿ ಈ ಕ್ಲರ್ಕ್ ನಾಲ್ಕು ಬಾರಿ ಮದುವೆಯಾಗಿರುವ ಕಾರಣ 32 ದಿನಗಳ ರಜೆಗೆ ವೇತನ ನೀಡಬೇಕು ಎಂದು ಬ್ಯಾಂಕ್ಗೆ ಸೂಚನೆ ನೀಡಿದೆ.
ಅಲ್ಲದೇ ಕಾರ್ಮಿಕ ಕಾನೂನನ್ನ ಉಲ್ಲಂಘಿಸಿದ ಕಾರಣ ಬ್ಯಾಂಕ್ಗೆ 52,800 ರೂಪಾಯಿ ದಂಡವನ್ನ ವಿಧಿಸಲಾಗಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೊಳಪಡುತ್ತಿದೆ.