ಆಕ್ಲಂಡ್: ಅಪ್ಪ ಅಮ್ಮನ ಜೊತೆಗೆ ಇರಲು ಬೇಸರವಾಗಿ ಬೇರೆ ಮನೆ ಮಾಡಲು ಇಚ್ಛಿಸಿದ್ದ ಮಗನಿಗೆ ಪೋಷಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಸಂಬಂಧ ಆಗಾಗ ಜಗಳವೂ ನಡೆಯುತ್ತಿತ್ತು. ಇದರಿಂದ ಬೇಸತ್ತ ಮಗ ತಂದೆ-ತಾಯಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆಕ್ಲಂಡ್ನಲ್ಲಿ ವಾಸವಿದ್ದ ಮಂಗಳೂರು ಮೂಲಕ ದಂಪತಿ ಬರ್ಬರವಾಗಿ ಕೊಲೆಯಾಗಿದ್ದಾರೆ.
ಎಲ್ಸಿ ಬಂಗೇರ ಮತ್ತು ಹರ್ಮನ್ ಬಂಗೇರ ಮೃತ ದುರ್ದೈವಿಗಳು. ಪದವಿ ಓದುತ್ತಿರುವ ಇವರ ಪುತ್ರ ಶೀಯಲ್ ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಶೀಯಲ್ಗೆ ತನ್ನ ಅಪ್ಪ-ಅಮ್ಮನ ಜೊತೆ ಇರಲು ಇಷ್ಟವಿರಲಿಲ್ಲ. ತಾನು ಸ್ವತಂತ್ರವಾಗಿ ಬೇರೆ ಮನೆಯಲ್ಲಿ ವಾಸವಾಗಲು ಇಚ್ಛಿಸಿದ್ದ. ಇದು ಆತನ ಪೋಷಕರಿಗೆ ಇಷ್ಟವಿರಲಿಲ್ಲ. ಇದೇ ವಿಷಯಕ್ಕೆ ಆಗಾಗ ಅವರ ಮಧ್ಯೆ ಜಗಳವಾಗುತ್ತಿತ್ತು.
5 ದಿನಗಳ ಹಿಂದೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿದ್ದು, ಕೋಪದಿಂದ ಶೀಯಲ್ ತನ್ನ ಅಪ್ಪ-ಅಮ್ಮನಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಅಕ್ಕಪಕ್ಕದವರು ಇದನ್ನು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಹರ್ಮನ್ ಅವರು ಮುಂಬಯಿಯ ಶಾಲೆಯೊಂದರಲ್ಲಿ ಆಡಳಿತಾಧಿಕಾರಿಯಾಗಿದ್ದರು. ಮುಂಬಯಿಯಲ್ಲಿ ಗೋದ್ರೆಜ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಲ್ಸಿ ಅವರೊಂದಿಗೆ ಹರ್ಮನ್ ಅವರ ಮದುವೆಯಾದ ಬಳಿಕ ದಂಪತಿ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲ್ಯಾಂಡ್ ತೆರಳಿದ್ದರು.
ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.