FIFA World Cup ನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೆಕ್ಸಿಕೋ (Mexico) ವಿರುದ್ಧ 2-0 ಅಂತರದ ಗೋಲುಗಳಿಂದ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ (Argentina) ಗೆಲುವು ದಾಖಲಿಸಿ ನಾಕೌಟ್ ರೇಸ್ ನಲ್ಲಿ ಉಳಿದುಕೊಂಡಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಮೆಸ್ಸಿ ಬಳಗ ಎದುರಾಳಿಗೆ ಎಲ್ಲಾ ವಿಭಾಗದಲ್ಲೂ ಕಂಟಕವಾಗಿ ಕಾಡಿತು.
ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ (lionel messi) ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಬಳಿಕ ರೋಚಕವಾಗಿ ಸಾಗಿದ ಕಾದಾಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನಿಂದ ಕಾದಾಡಿದವು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಫುಲ್ ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿದೆ. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು. ಜೊತೆಗೆ ನಾಕೌಟ್ ಗೇರುವ ಅವಕಾಶವನ್ನು ಉಳಿಸಿಕೊಂಡಿತು. ಇದನ್ನೂ ಓದಿ : – ಮ್ಯಾಂಚೆ ಸ್ಟರ್ ಯುನೈಟೆಡ್ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ
ಅತ್ತ ಗೆಲುವಿನ ಹೀರೋ ಆಗಿ ಅರ್ಜೆಂಟೀನಾ ದಿಗ್ಗಜ ಆಟಗಾರ ಮೆಸ್ಸಿ ಮೆರೆದಾಡಿದರು. ಮೆಕ್ಸಿಕೋ ವಿರುದ್ಧ ಏಕೈಕ ಗೋಲು ಸಿಡಿಸಿದ ಮೆಸ್ಸಿ World Cup ನಲ್ಲಿ ಈವರೆಗೆ ಅರ್ಜೆಂಟೀನಾ ಪರ 8 ಗೋಲು ಸಿಡಿಸಿದ ಸಾಧನೆ ಮಾಡಿದರು. ಈ ಸಾಧನೆಯೊಂದಿಗೆ ಫುಟ್ ಬಾಲ್ (Foot ball) ದಂತಕಥೆ ಅರ್ಜೆಂಟೀನಾದ ಮಾಜಿ ಆಟಗಾರ ಡಿಯಾಗೋ ಮರಡೋನಾ ಅವರ 8 ಗೋಲುಗಳ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ. ಇವರಿಬ್ಬರೂ ಕೂಡ ತಾವಾಡಿದ 21 ಪಂದ್ಯಗಳಲ್ಲಿ 8 ಗೋಲು ಸಿಡಿಸಿ ಮಿಂಚಿದ್ದಾರೆ.
ಇದನ್ನೂ ಓದಿ : – ಟೀಂ ಇಂಡಿಯಾ ನೀಡಿದ 307 ರನ್ ಗುರಿ ಭೇದಿಸಿದ ನ್ಯೂಜಿಲ್ಯಾಂಡ್ – 7 ವಿಕೆಟ್ ನಿಂದ ಭರ್ಜರಿ ಜಯ