ಪಾರ್ಕ್ ಬಂದವರನ್ನೇ ಗುರಿಯಾಗಿಸಿ ಮೊಬೈಲ್ ಗಳನ್ನ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಇದೇ ಪ್ರಯತ್ನದಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದು ಮಸಣ ಸೇರಿದ ಘಟನೆ ಕಲಬುರಗಿಯಲ್ಲಿ ಸಂಭವಿಸಿದೆ.
ಮೃತ ಮೊಬೈಲ್ ಕಳ್ಳ ನಗರದ ಹಮಾಲವಾಡಿ ನಿವಾಸಿ ಎನ್ನಲಾಗುತ್ತಿದ್ದು, ಮೃತ ಕಳ್ಳನ ಬಗ್ಗೆ ಇನ್ನು ಖಚಿತ ಮಾಹಿತಿ ಲಭ್ಯವಾಗಿಲ್ಲ. ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೆಡೆ ಹಾಳು ಬಿದ್ದ ಬಾವಿಯಲ್ಲಿ ರಕ್ಷಣಾ ಸಿಬ್ಬಂದಿಯಿಂದ ಶೋಧ ಕಾರ್ಯ, ಇನ್ನೊಂದೆಡೆ ಎಷ್ಟೇ ಹುಡುಕಾಡಿದರೂ ಬಾಡಿ ಸಿಗದಕ್ಕೆ ಬಾವಿಯಿಂದ ನೀರು ಖಾಲಿ ಮಾಡಲಾಯಿತು.
ಕಳ್ಳನೋರ್ವ ಮೊಬೈಲ್ ಕಿತ್ತುಕೊಂಡು ಓಡಿ ಹೊತ್ತಿದ್ದ. ಮೊಬೈಲ್ ಕಳ್ಳತನ ಆಗ್ತಿದ್ದಂತೆ ವ್ಯಕ್ತಿ ಕಿರುಚಲು ಆರಂಭಿಸಿದ್ದಾಗ ಸಾರ್ವಜನಿಕರು ಕಳ್ಳನ ಬೆನ್ನಟ್ಟಿದ್ದಾರೆ. ಬಚಾವ್ ಆಗಲು ಎದ್ನೋ ಬಿದ್ನೋ ಅಂತಾ ಮೊಬೈಲ್ ಕಳ್ಳ ಓಡಿ ಹೋಗುತ್ತಿದ್ದ ವೇಳೆ ಪಾಳುಬಿದ್ದ ಐತಿಹಾಸಿಕ ಬಾವಿಯಲ್ಲಿ ಬಿದ್ದಿದ್ದಾನೆ. ಮಾಹಿತಿ ತಿಳಿದು ಕಲಬುರಗಿ ಮಹಾನಗರ ಪಾಲಿಕೆ ಸಿಬ್ಬಂದಿ ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಕಳ್ಳ ಪತ್ತೆಯಾಗದಿದ್ದಾಗ ಬಾವಿಯಲ್ಲಿದ್ದ ನೀರು ಖಾಲಿ ಮಾಡಲು ಮುಂದಾಗಿದ್ದಾರೆ.
ಇದೇ 26 ರ ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಮೊಬೈಲ್ ಕಳ್ಳ ಮೊಬೈಲ್ ಕಿತ್ತುಕೊಂಡು ಓಡಿಹೋಗ್ತಿದ್ದ. ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಹೋಗಿ ಮಬ್ಬು ಕತ್ತಲಿನಲ್ಲಿ ದಾರಿ ಕಾಣದೆ ಬಾವಿಯೊಳಗೆ ಬಿದ್ದಿದ್ದಾನೆ. ಸಾರ್ವಜನಿಕರ ಮಾಹಿತಿ ಮೇರೆಗೆ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಬಾವಿಯಲ್ಲಿ ಅಪಾರ ಪ್ರಮಾಣದ ನೀರು, ಹೂಳು ತುಂಬಿಕೊಂಡಿರೋದ್ರಿಂದ ಶೋಧ ಕಾರ್ಯಕರ್ಯಕ್ಕೆ ಅಡ್ಡಿ ಉಂಟಾಗಿತ್ತು. ಹೀಗಾಗಿ ಕೊನೆಗೆ ಬಾವಿಯಲ್ಲಿನ ನೀರು ಖಾಲಿ ಮಾಡಲು ನಿರ್ಧರಿಸಿ ಸತತ ಎರಡು ದಿನಗಳ ಕಾಲ ನೀರು ಖಾಲಿ ಮಾಡಿದಾಗ ಮೊಬೈಲ್ ಕಳ್ಳನ ಮೃತ ದೇಹ ಪತ್ತೆಯಾಗಿದೆ.