ಮಾರ್ಚ್ 29 ರಂದು ಹೋಳಿ ಆಡುವ ನೆಪದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 8 ಮಂದಿ ಯುವಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಬಾಲಕಿಯರು 14 ಮತ್ತು 15 ವರ್ಷ ವಯಸ್ಸಿನ ಖೋವಾಯ್ ಪ್ರದೇಶದ ನಿವಾಸಿಗಳು. ಹೋಳಿ ಹಬ್ಬದಂದು ಬಣ್ಣ ಆಡಲು ತೆರಳಿದ್ದ ಬಾಲಕಿಯರು ಮನೆಗೆ ಹಿಂತಿರುಗಿರಲಿಲ್ಲ.ಸಂಜೆಯಾದರೂ ಮನೆಗೆ ಬಾರದಕ್ಕೆ ಆತಂಕಗೊಂಡ ಪೋಷಕರು ಬಾಲಕಿಯರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ.
ಮರುದಿನ ಮಾರ್ಚ್ 30 ರಂದು ಮನೆಗೆ ಮರಳಿದ ಬಾಲಕಿಯರು ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯರ ದೇಹದ ಮೇಲೆ ಗಾಯಗಳಾಗಿವೆ. ಇಡೀ ರಾತ್ರಿ 8 ಮಂದಿ ಯುವಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಬಾಲಕಿಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಣ್ಣದ ಹಬ್ಬದ ಸಂಭ್ರಮಾಚರಣೆಲ್ಲಿದ್ದ ಬಾಲಕಿಯರನ್ನು ಬಲವಂತವಾಗಿ ಕಾಡಿಗೆ ಕರೆದೊಯ್ದು ರಾತ್ರಿಯಿಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಬಾಲಕಿಯರ ಹೇಳಿಕೆ ಮೇರೆಗೆ ಆರೋಪಿಗಳಿಗೆ ಬಲೆ ಬೀಸಿ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.