ಉಕ್ರೇನ್ ಮೇಲಿನ ಯುದ್ಧದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕನ್ನಡಿಗ ಹಾವೇರಿಯ ನವೀನ್ ಸಾವನ್ನಪ್ಪಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ಮುಂದುವರಿದಿದ್ದು, ಯುದ್ಧ ವಿರಾಮ ಘೋಷಣೆಯಾಗುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದು, ನವೀನ್ ಮೃತದೇಹವನ್ನು ಶೀಘ್ರವಾಗಿ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಪ್ರಮುಖವಾಗಿ ಭಾರತದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲಾಯಿತು. ಸಭೆಯಲ್ಲಿ ಪ್ರಧಾನಿ ಮೋದಿ ಆಪರೇಷನ್ ಗಂಗಾದ ಬಗ್ಗೆಯೂ ಪರಿಶೀಲನೆ ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಎನ್ಎಸ್ಎ ಅಜಿತ್ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಅನೇಕ ಹಿರಿಯ ಅಧಿಕಾರಿಗಳು ಮತ್ತು ಹಣಕಾಸು ಮಂತ್ರಿಗಳು ಇದರಲ್ಲಿ ಉಪಸ್ಥಿತರಿದ್ದರು. ಉನ್ನತ ಮಟ್ಟದ ಸಭೆಯಲ್ಲಿ ಮೂರು ಸೇನೆಗಳ ಮುಖ್ಯಸ್ಥರೂ ಸಹ ಭಾಗವಹಿಸಿದ್ದರು.
0 93 Less than a minute