ಬೆಂಗಳೂರು : ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಮಾಡುವುದಿಲ್ಲ. ಆದರೆ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ವಿಧಾನಸೌಧದಲ್ಲಿ ಇಂದು ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್ಡೌನ್ ಮಾಡುವಂತ ಪರಿಸ್ಥಿತಿಯಿಲ್ಲ. ನಾಳೆ ಸಿಎಂ, ರಾಜ್ಯಪಾಲರ ಜೊತೆ ಸರ್ವಪಕ್ಷ ಸಭೆ ಬಳಿಕ ಹೊಸ ಮಾರ್ಗಸೂಚಿ ಪ್ರಕಟಿಸಲಿದ್ದಾರೆ ಎಂದರು.
ಕರ್ಫ್ಯೂ ವಿಸ್ತರಣೆ ಸೇರಿದಂತೆ ಬಿಗಿ ನಿಯಂತ್ರಣದ ಕುರಿತು ನಾಳೆ ತೀರ್ಮಾನಿಸುತ್ತೇವೆ. ರಾಜ್ಯಪಾಲರ ಅಭಿಪ್ರಾಯ ಪಡೆದ ನಂತರ ಅಂತಿಮವಾಗಿ ಸಿಎಂ ಮಾರ್ಗಸೂಚಿ ಪ್ರಕಟಿಸುತ್ತಾರೆ. ಮುಂದಿನ ಎರಡು ತಿಂಗಳು ಕಷ್ಟದ ಸಂದರ್ಭ ಇರುವುದರಿಂದ ಎರಡು ತಿಂಗಳು ನಿಭಾಯಿಸಬೇಕು. ಆಕ್ಸಿಜನ್ ಕೊರತೆ ಇರುವ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಸಿಲಿಂಡರ್ ಇಡಲು ಸ್ಥಳವಿಲ್ಲ. ಜಿಂದಾಲ್ ಮಾಲೀಕರ ಜೊತೆ ಮಾತನಾಡಿದ್ದು, ಆಕ್ಸಿಜನ್ ನೀಡಲು ಒಪ್ಪಿದ್ದಾರೆ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಬಂದಿದ್ದು, ಈಗಾಗಲೇ ನಾಲ್ಕೈದು ಜನರನ್ನ ಬಂಧಿಸಿದ್ದಾರೆ. ಗಡಿ ಭಾಗದಲ್ಲಿ ಇಂತ ಕೆಲಸ ನಡೆಯುತ್ತಿದ್ದು, ಅವರನ್ನ ವಶಕ್ಕೆ ಪಡೆಯಲಾಗಿದೆ. ಮೂರ್ನಾಲ್ಕು ದಿನದಲ್ಲಿ ಖಾಸಗಿ ಆಸ್ಪತ್ರೆ ಬೆಡ್ ನೀಡಲು ಒಪ್ಪಿದ್ದಾರೆ. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಎಂಟು ಗಂಟೆಗೆ ನೈಟ್ ಕರ್ಫೂ ಮಾಡುವುದಕ್ಕೆ ವಿರೋಧ ಇದೆ. ಆಕ್ಸಿಜನ್ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದೇವೆ. ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ನಿಗ್ರಹಕ್ಕೆ ಸಲಹೆ ಬಂದಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕೆಲವು ಫಾರ್ಮಾಸಿಸ್ಟ್ ಗಳೂ ಇದರಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಇನ್ನೂ ಬೆಡ್ ಗಳ ಸಮಸ್ಯೆ ಬಗೆಹರಿಸಲು ಶಾಸಕರಿಂದ ಸಲಹೆ ಬಂದಿದ್ದು, ಬೆಡ್ ಗಳನ್ನು ಖಾಸಗಿಯವರಿಂದ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ಬೆಡ್ ಸಮಸ್ಯೆಗೆ ನೋಡಲ್ ಆಫೀಸರ್ ನೇಮಕ ಆಗಿದೆ. ಇನ್ನಷ್ಟು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆ್ಯಂಬುಲೆನ್ಸ್ ವ್ಯವಸ್ಥೆಯಲ್ಲಿ ವ್ಯತ್ಯಾಸ ಇಲ್ಲದಂತೆ ಕ್ರಮ ಕೈಗೊಂಡಿದ್ದು, 49 ಆ್ಯಂಬುಲೆನ್ಸ್ ಗಳು ಶವ ಸಾಗಿಸಲು ನಿಯೋಜನೆ ಮಾಡಲಾಗಿದೆ. ಚಿತಾಗಾರದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. 144 ಸೆಕ್ಷನ್ ಹಾಕಲು ಕೆಲವರು ಸಲಹೆ ಕೊಟ್ಟದ್ದಾರೆ. ಲಾಕ್ ಡೌನ್ ಬೇಡ ಎಂಬ ಸಲಹೆ ಕೊಟ್ಟಿದ್ದಾರೆ. ಈ ಎಲ್ಲದರ ಬಗ್ಗೆ ಸಿಎಂ ಅವಲೋಕನ ಮಾಡಲಿದ್ದಾರೆ ಎಂದರು.