ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ದೆಹಲಿ ಪಾಲಿಕೆಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಈ ಪ್ರಕರಣದ ಆದೇಶ ನೀಡಿದ ಬಳಿಕ ನಡೆದ ತೆರವು ಕಾರ್ಯಾಚರಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಒತ್ತುವರಿಗಳ ತೆರವು ಕಾರ್ಯಕ್ಕೆ ತಡೆ ನೀಡಿ ಆದೇಶ ಹೊರಡಿಸಿದ ಬಳಿಕವೂ ಕಾರ್ಯಾಚರಣೆ ನಡೆಸಲಾಗಿದೆ. ಮೇಯರ್‌ಗೆ ಸುಪ್ರೀಂಕೋರ್ಟ್ ನಿರ್ಧಾರದ ಕುರಿತು ಮಾಹಿತಿ ನೀಡಿದ ನಂತರ ಕೂಡ ಕಾರ್ಯ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು.
ಮುಂದಿನ ಆದೇಶದವರೆಗೂ ಜಹಾಂಗೀರ್‌ಪುರಿಯಲ್ಲಿ ಯಾವುದೇ ತೆರವು ಕಾರ್ಯಾಚರಣೆ ನಡೆಯುವುದಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ನಗರ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ಮನೆಗಳನ್ನು ನೆಲಸಮ ಮಾಡುತ್ತಿರುವ ವಿವಿಧ ರಾಜ್ಯಗಳ ಅಧಿಕಾರಿಗಳ ವಿರುದ್ಧ ಜಮೈತ್ ಇ ಹಿಂದ್ ಸಲ್ಲಿಸಿರುವ ಮತ್ತೊಂದು ಅರ್ಜಿಯನ್ನು ಕೂಡ ಪರಿಗಣಿಸಿರುವ ನ್ಯಾಯಪೀಠ, ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಿಗೆ ನೋಟಿಸ್ ಜಾರಿಮಾಡಿದೆ. ‘ಸಮಾಜದ ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡಲಾಗಿದೆ’ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದಾರೆ.
ಇದನ್ನು ಓದಿ :- ರಹಸ್ಯ ಸ್ಥಳದಿಂದ ವಿಡಿಯೋ ಹರಿಬಿಟ್ಟ ವಾಸೀಂ ಪಠಾಣ್ ..!