ಕರ್ನಾಟಕದಲ್ಲಿ 2 ಸೇರಿದಂತೆ ದೇಶಾದ್ಯಂತ 40 ರೂಪಾಂತರಿ ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸರಕಾರ ದೃಢಪಡಿಸಿದೆ. ಅತ್ಯಂತ ವೇಗವಾಗಿ ಹರಡುವ ಡೆಲ್ಟಾ ಪ್ಲಸ್ ನಿಂದ ಮತ್ತೆ ಆತಂಕ ಶುರುವಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ ಸರಕಾರಗಳಿಗೆ ಡೆಲ್ಟಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಬೆನ್ನಲ್ಲೇ 40 ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಿದೆ.
ಬಿ.1.617.2 ರೂಪಾಂತರಿ ಎಂದು ಹೆಸರಿಡಲಾಗಿರುವ ಡೆಲ್ಟಾ ಪ್ಲಸ್ ಸೋಂಕು ಮಹಾರಾಷ್ಟ್ರವೊಂದರಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3 ಮತ್ತು ಕರ್ನಾಟಕದಲ್ಲಿ 2, ಪಂಜಾಬ್, ಆಂಧ್ರಪದೇಶ ಮತ್ತು ಜಮ್ಮುವಿನಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಸರಕಾರ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಪ್ರಕಟಿಸಿದೆ.
ದೇಶಾದ್ಯಂತ ಆರಂಭಿಕ ಹಂತದಲ್ಲಿ ಪತ್ತೆಯಾದ ಸೋಂಕು ಪ್ರಕರಣಗಳು ಇದಾಗಿದ್ದು, ಇನ್ನು ಹೆಚ್ಚಿನ ಸಂಖ್ಯೆಯ ಪ್ರಕರಣಗಳಿದ್ದು, ಇವುಗಳ ಪರೀಕ್ಷೆ ನಡೆಯಬೇಕಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಕೊರೊನಾ ಎರಡನೇ ಅಲೆಯ ಅಬ್ಬರ ಇಳಿಯುತ್ತಿದ್ದಂತೆ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದ್ದು, ಈ ಸಂಖ್ಯೆ ಕೂಡ ಶೀಘ್ರ ಹೆಚ್ಚುತ್ತಿರುವುದು ಜನತೆಗೆ ಆತಂಕ ಉಂಟು ಮಾಡಿದರೆ, ಕೇಂದ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.