ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಣ್ಣುತಪ್ಪಿಸಿ ರವಿಯನ್ನು ಪೊಲೀಸರು ಹೊರಗೆ ಕರೆದೊಯ್ದರು. ನಿಲ್ದಾಣದ ಒಂದು ದ್ವಾರದಲ್ಲಿ ಎಲ್ಲರಿಗೂ ಕಾಣಿಸುವಂತೆ, ಮತ್ತೊಂದು ದ್ವಾರದಲ್ಲಿ ಗೌಪ್ಯವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿಮಾನ ನಿಲ್ದಾಣದ ಭದ್ರತಾಪಡೆಯ ಗೇಟ್ನಿಂದ ಹೊರಗೆ ಕರೆದೊಯ್ದರು.
ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್ನಲ್ಲಿ ಸ್ಯಾಂಟ್ರೋ ರವಿ ಇದ್ದುದನ್ನು ಪತ್ತೆ ಮಾಡಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ರಸ್ತೆ ಮಾರ್ಗದಲ್ಲಿ ರವಿಯನ್ನು ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂದು ನ್ಯಾಯಾಧೀಶರ ಎದುರು ರವಿಯನ್ನು ಹಾಜರಿಪಡಿಸಲಾಗುವುದು. ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಲಿದ್ದಾರೆ. ಇದನ್ನು ಓದಿ :- ಮಹಿಳೆಯೇ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು – ಶಂಕರ್ ಮಿಶ್ರಾ
ಸ್ಯಾಂಟ್ರೋ ರವಿ ಗುಜರಾತ್ ನಲ್ಲಿ ಇರಬಹುದು ಎಂಬ ಅನುಮಾನದ ಮೇಲೆ ಕರ್ನಾಟಕ ಪೊಲೀಸರ ತಂಡವನ್ನು ತರಾತುರಿಯಲ್ಲಿ ಅಹಮದಾಬಾದ್ ಗೆ ಕಳಿಸಲಾಗಿತ್ತು. ಈ ಪೈಕಿ ಮೈಸೂರು ಪೊಲೀಸರ ಬಳಿ ಸ್ಯಾಂಟ್ರೋ ರವಿಯ ಹಳೆಯ 3 ಫೋಟೊಗಳಿದ್ದವು. ಅವನ ತಲೆಯಲ್ಲಿ ಕೂದಲು ಇಲ್ಲ. ಹೀಗಾಗಿ ಟೋಪನ್ ಧರಿಸುತ್ತಾನೆ ಎಂಬ ಮಾಹಿತಿಯಿದ್ದ ಪೊಲೀಸರು ಬೋಳುತಲೆ, ಗಡ್ಡಮೀಸೆ ಇಲ್ಲದ ರೇಖಾಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಲೆಕ್ಕಾಚಾರದಂತೆ ಅವನೂ ಗುರುತು ಬದಲಿಸಿಕೊಂಡಿದ್ದ. ಆದರೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಅವನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾದರು.
ಇದನ್ನು ಓದಿ :-ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ- ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್