ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಅಂಗೀಕರಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ಸರ್ಕಾರ, ತಮಿಳುನಾಡಿನ ನಿಲುವನ್ನು ಖಂಡಿಸಿ ನಿರ್ಣಯ ಅಂಗೀಕರಿಸಲು ನಿರ್ಧರಿಸಿದೆ. ವಿಧಾನಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇಂದು ಸಂಜೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯ ಸರ್ಕಾರ ಬುಧವಾರ ಖಂಡನಾ ನಿರ್ಣಯವನ್ನು ಅಂಗೀಕರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾವೇರಿಗೆ ಸಂಬಂಧಿಸಿದಂತೆ ಕರ್ನಾಟಕ ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ ತಮಿಳುನಾಡು ವಿರೋಧಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ತಮಿಳುನಾಡು ತನ್ನ ಪಾಲಿನಲ್ಲದ ಹೆಚ್ಚುವರಿ ನೀರನ್ನು ಬಳಸಿಕೊಳ್ಳುತ್ತಿದೆ ಮತ್ತು ಯಾವುದೇ ಅನುಮತಿಯಿಲ್ಲದೆ ತಮಿಳುನಾಡಿನ ದಕ್ಷಿಣಕ್ಕೆ ಜಲಾಶಯದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಇದು ಕಾನೂನುಬಾಹಿರವಾಗಿದೆ. ಇದರ ವಿರುದ್ಧವೂ ನಾವು ನಿರ್ಣಯ ಅಂಗೀಕರಿಸುತ್ತೇವೆ. ನಾವು ಕಾನೂನು ತಜ್ಞರೊಂದಿಗೆ ಚರ್ಚಿಸಿ ತಮಿಳುನಾಡು ವಿರುದ್ಧ ನಿರ್ಣಯವನ್ನು ಅಂಗೀಕರಿಸುತ್ತೇವೆ. ಉಭಯ ಸದನಗಳಲ್ಲಿ ಬುಧವಾರ ಸರ್ಕಾರದ ನಿರ್ಧಾರ ತೆಗೆದುಕೊಳ್ಳಲಿದೆ” ಎಂದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕೆಲವು ವರ್ಷಗಳ ಹಿಂದೆ ಕಾವೇರಿ ಅಂತಿಮ ಆದೇಶ ಬಂದಿದ್ದರೂ, ತಮಿಳುನಾಡು ಸರ್ಕಾರವು ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ ಎಂದರು. ತಮಿಳುನಾಡು ಸರ್ಕಾರ ನಮ್ಮ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು, ನಾವು ಅವರಿಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ಮಾಧುಸ್ವಾಮಿ ಕಿಡಿಕಾರಿದ್ದಾರೆ.
ಇದಕ್ಕೂ ಮುನ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಲ್ಲ ಪಕ್ಷಗಳ ಸದಸ್ಯರು, ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ತಮಿಳುನಾಡು ಸರ್ಕಾರದ ನಿರ್ಣಯವನ್ನು ಖಂಡಿಸಿದರು. ತಮಿಳುನಾಡು ಅನಗತ್ಯವಾಗಿ ಅಡ್ಡಿ ಉಂಟು ಮಾಡುತ್ತಿರುವುದು ಕೆಟ್ಟ ನಿದರ್ಶನ ಎಂದರು.
ಇದನ್ನು ಓದಿ- ತಮಿಳುನಾಡಿಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ