ನವಜಾತ ಶಿಶುಗಳ ಪಾದಗಳನ್ನು ಕಚ್ಚಿ ಇಲಿಗಳು ತಿಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಅತ್ಯಂತ ಸ್ವಚ್ಛ ನಗರಿ ಎಂದೇ ಹೆಸರಾದ ಇಂದೋರ್ ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ನವಜಾತ ಶಿಶುಗಳಿಗೆ ಸೂಕ್ತ ವ್ಯವಸ್ಥೆ ಮಾಡದ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಆರೋಪಿಸಲಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
ಸರ್ಕಾರದ ಅಧೀನದಲ್ಲಿರುವ ಮಹಾರಾಜ ಯಶವಂತರಾವ್(ಎಂವೈ) ಆಸ್ಪತ್ರೆಯಲ್ಲಿ ಇಲಿಗಳು ನವಜಾತ ಶಿಶುಗಳ ಕಾಲುಗಳನ್ನು ಕಚ್ಚಿ ತಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಮೇಂದ್ರ ಠಾಕೂರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಇಬ್ಬರು ವೈದ್ಯರು ಮತ್ತು ಆಡಳಿತಾಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.