ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಗ್ಗಲೂರು ಬಳಿ ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಮಾಡಿರುವ ಸೂರ್ಯ ಎಲಿಗೆನ್ಸ್ ವಸತಿ ಸಮುಚ್ಛಯವನ್ನು ವಸತಿ ಸಚಿವ ಸೋಮಣ್ಣ ಉದ್ಘಾಟನೆ ಮಾಡಿದರು.
6 ಎಕರೆ ವ್ಯಾಪ್ತಿಯಲ್ಲಿ ಸುಮಾರು 358 ಮನೆಗಳನ್ನ ನಿರ್ಮಾಣ ಮಾಡಿದ್ದು ಅತ್ಯುತ್ತಮ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದರು. ಅಲ್ಲದೆ ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಖರೀದಿ ಮಾಡಿದ್ದ ಮಾಲೀಕರಿಗೆ ಹಕ್ಕುಪತ್ರವನ್ನು ಸಚಿವರು ವಿತರಣೆ ಮಾಡಿದರು.
ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಫಲಾನುಭವಿಗಳು 5 ಲಕ್ಷ ನೀಡಿ ಮನೆಗಳನ್ನ ಖರೀದಿ ಮಾಡಬಹುದಾಗಿದೆ. ಆ ಮೂಲಕ ಪ್ರಧಾನಮಂತ್ರಿಗಳ ಆಶಯವನ್ನು ಈಡೇರಿಸುತ್ತಿದ್ದೇವೆ ಎಂದರು.
ಈ ನಡುವೆ ಕೆಹೆಚ್ಬಿ ಅಧಿಕಾರಿಗಳು ಸೂರ್ಯ ಸಿಟಿಯಲ್ಲಿ ಸುತ್ತಮುತ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಎಂಬ ದೂರನ್ನ ಸ್ವೀಕರಿಸಿ ಮಾತನಾಡಿದ ಅವರು ಕೂಡಲೇ ಈ ನಿಟ್ಟಿನಲ್ಲಿ ಕೆಹೆಚ್ಬಿ ಅಧಿಕಾರಿಗಳ ಸಭೆ ಕರೆದು ಕೆಳ ಹಂತದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತೇವೆ ಎಂದು ವಸತಿ ಸಚಿವ ಸೋಮಣ್ಣ ತಿಳಿಸಿದರು.
ಬಳಿಕ ಮಾತನಾಡಿದ ಸಂಸದ ಡಿಕೆ ಸುರೇಶ್ ಬೆಂಗಳೂರು ನಗರ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದು , ಸುತ್ತಮುತ್ತ ಯಾವುದೇ ಅತ್ಯಾಧುನಿಕ ಕ್ರಿಡಾಂಗಣವಿಲ್ಲ ಹಾಗಾಗಿ ಸೂರ್ಯನಗರ 4 ನೇ ಹಂತದಲ್ಲಿ 100 ಎಕರೆ ಜಾಗದಲ್ಲಿ ಅತ್ಯಾಧುನಿಕವಾಗಿ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಇದರ ಜೊತೆಗೆ ಸ್ಥಳೀಯರಿಗೆ ಫ್ಲಾಟ್ ಖರೀದಿ ಮಾಡುವಾಗ ಶೇಕಡ 10 ರಷ್ಟು ವಿನಾಯಿತಿ ನೀಡುವಂತೆ ಕೇಳಿ ಕೊಂಡಿದ್ದಾರೆ.