ಬೆಂಗಳೂರು: ಸಿಡಿ ಯುವತಿ ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿದ್ದಾರೆ. ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿರುವ ಸಿಡಿ ಯುವತಿಯನ್ನು ಬಳಿಕ ಎಸ್ಐಟಿ ಅಧಿಕಾರಿಗಳೂ ವಿಚಾರಣೆಗೆ ಒಳಪಡಿಸಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಆಕೆ ಎಸ್ಐಟಿ ತಂಡದ ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ವೇಳೆ ಯುವತಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸುವ ಸಾಧ್ಯತೆಯಿದ್ದು, ಅದಕ್ಕಾಗಿ ಈಗಾಗಲೇ ಎಸ್ಐಟಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಯ ನಿನ್ನೆಯ ಹೇಳಿಕೆ ಮತ್ತು ಇಂದಿನ ಎಸ್ಐಟಿ ವಿಚಾರಣೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟೆನ್ಷನ್ ಹೆಚ್ಚಾಗಿದೆ.
ಇಂದು ಸಿಡಿ ಯುವತಿ ನೀಡುವ ಹೇಳಿಕೆಯ ಮೇಲೆ ರಮೇಶ್ ಜಾರಕಿಹೊಳಿಯ ಭವಿಷ್ಯ ನಿಂತಿದೆ. ಒಂದುವೇಳೆ ಆಕೆ ಜಾರಕಿಹೊಳಿ ವಿರುದ್ಧ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದಲ್ಲಿ ಯುವತಿಯ ವಿಚಾರಣೆ ನಡೆಯಲಿದೆ. ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಯುವತಿಯ ವಿಚಾರಣೆ ನಡೆಯಲಿದ್ದು, ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ. ಯುವತಿಯಿಂದ ಮಾಹಿತಿ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ವೈದ್ಯಕೀಯ ಪರೀಕ್ಷೆ ಆದ ಬಳಿಕ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ.