ನೆರೆ ರಾಷ್ಟ್ರ ಶ್ರೀಲಂಕಾ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ದ್ವೀಪ ರಾಷ್ಟ್ರ ಅಕ್ಷರಶಹ ಬೀದಿಗೆ ಬಿದ್ದಿದೆ. ಲಂಕೆಯಲ್ಲಿ ತಿನ್ನೋ ತುತ್ತಿಗೆ ಕುಡಿಯೋ ನೀರಿಗೂ ಹಾಹಾಕಾರವೆದ್ದಿದೆ. ಒಂದು ಕೆಜಿ ಅಕ್ಕಿ ಬೆಲೆ 400 ರೂಪಾಯಿ, ಸಕ್ಕರೆ ಬೆಲೆ 290 ರೂಪಾಯಿ ದಾಟಿದೆ. ಶ್ರೀಲಂಕಾದಲ್ಲಿ ಏನಾಗುತ್ತಿದೆ ಎಂದು ತಿಳಿಯಬಾರದೆಂದು ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾಗಳ ಮೇಲೆ ನಿರ್ಬಂಧ ಹೇರಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಿದೆ. ಶ್ರೀಲಂಕಾದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು ಸೇನೆಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಪರಿಣಾಮ ಸೇನೆ ಮತ್ತು ಜನರ ನಡುವೆ ಸಂಘರ್ಷ ಹೆಚ್ಚಿದೆ.
ಶ್ರೀಲಂಕಾದಲ್ಲಿನ ಆರ್ಥಿಕ ದುಸ್ಥಿತಿಗೆ ಕಾರಣಗಳು ಹಲವಾರು.
1 ಮೊದಲನೆಯದಾಗಿ ಕೋವಿಡ್ ಹೊಡೆತದ ಪರಿಣಾಮ ಶ್ರೀಲಂಕಾ ಪ್ರವಾಸೋದ್ಯಮ ನೆಲಕಚ್ಚಿದೆ. ಪ್ರವಾಸೋದ್ಯಮವೇ ಶ್ರೀಲಂಕಾದ ಜಿಡಿಪಿಗೆ ಶೇ 10ರಷ್ಟು ಕೊಡುಗೆ ನೀಡುತ್ತಿತ್ತು. ಆದ್ರೆ ಪ್ರವಾಸೋದ್ಯಮ ನೆಲ ಕಚ್ಚಿರೋದ್ರಿಂದ ಹಲವಾರು ಮಂದಿ ಇಲ್ಲಿ ಮೂಲ ಉದ್ಯೋಗಗಳನ್ನ ಕಳೆದುಕೊಂಡಿದ್ದಾರೆ.
2 ಸರ್ಕಾರದ ವೆಚ್ಚದಲ್ಲಿ ಏರಿಕೆ ತೆರಿಗೆ ಕಡಿತ ಉಪಮಕ್ರಮಗಳು
3 ಜೊತೆಗೆ ಚೀನಾ ದೇಶಕ್ಕೆ ಕೊಡಬೇಕಿರುವ ಭಾರಿ ಸಾಲದ ಹೊರೆ
4 ದೇಶದಲ್ಲಿ ಕನಿಷ್ಟಮಟ್ಟಕ್ಕೆ ಕುಸಿದ ವಿದೇಶಿ ವಿನಿಮಯ ಸಂಗ್ರಹ
5 ಸಾಲ ತೀರಿಸಲು ಸರ್ಕಾರ ನೋಟುಗಳನ್ನು ಹೆಚ್ಚು ಮುದ್ರಿಸಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಇದೆಲ್ಲದರಿಂದ ಶ್ರೀಲಂಕಾ ಪಾರಾಗಲು ಭಾರತ ಮತ್ತು ಚೀನಾ ಸಹಾಯಹಸ್ತ ನೀಡಬೇಕಾಗಿದೆ. ಇದರ ಜೊತೆಗೆ ಐಎಂಎಫ್ ಕೂಡ ಸಹಾಯ ಸಹಾಯ ನೀಡಲೇಬೇಕಾಗಿದೆ.
ಭಾರತಕ್ಕೆ ಇದು ಎಚ್ಚರಿಕೆಯ ಗಂಟೆ.. !
ಶ್ರೀಲಂಕಾದ ಈ ಪರಿಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಭಾರತದಲ್ಲೂ ಆಹಾರ, ಇಂಧನಕ್ಕೆ ಹಾಹಾಕಾರ ಎದುರಾಗಬಹುದು ಎನ್ನುತ್ತಾರೆ ತಜ್ಞರು..!
ರಾಜಕೀಯ ಪಕ್ಷಗಳು ಘೋಷಿಸುವ ಜನಪ್ರಿಯ ಯೋಜನೆಗಳು ದೇಶದ ಆರ್ಥಿಕತೆಗೆ ಮುಳುವಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಚುನಾವಣೆ ವೇಳೆ ಬಜೆಟ್‌ನಲ್ಲಿ ಘೋಷಿಸುವ ಉಚಿತ ಭಾಗ್ಯಗಳೇ ಕಂಟಕವಾಗುವ ಸಾಧ್ಯತೆ ಇದೆ..! ಆಹಾರ, ವಿದ್ಯುತ್, ತೆರಿಗೆ ಕಡಿತ ಸೇರಿದಂತೆ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆಯೇ ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಅವುಗಳನ್ನ ಜಾರಿಗೆ ತರಲು ಹೊರಡುತ್ತವೆ. ಇವು ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಕಂಟಕವಾಗುವ ಸಾಧ್ಯತೆಗಳಿವೆ.
ಪಂಜಾಬ್, ದಿಲ್ಲಿ, ತೆಲಂಗಾಣ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಈಗಾಗಲೇ ಜನರಿಗೆ ನೀಡಿರುವ ಉಚಿತ ‘ಭಾಗ್ಯ’ಗಳು ಆಯಾ ರಾಜ್ಯಗ ಆರ್ಥಿಕತೆಗೆ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಕೆಲವು ರಾಜಕೀಯ ಪಕ್ಷಗಳು ಜನರಿಗೆ ಉಚಿತ ವಿದ್ಯುತ್‌ನ ಆಮಿಷ ನೀಡುತ್ತಿವೆ. ದೆಹಲಿಯಲ್ಲಿ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ. ಅದರ ಹೊರೆಯನ್ನು ಹೊರಲು ರಾಜ್ಯದ ಖಜಾನೆಗೆ ಶಕ್ತಿ ಇಲ್ಲ. ಬಜೆಟ್‌ನಲ್ಲಿ ಘೋಷಣೆಯಾಗುವ ಈ ಜನಪ್ರಿಯ ಯೋಜನೆಗಳಿಂದಾಗಿ ಅತ್ಯಗತ್ಯವಾಗಿ ಬೇಕಿರುವ ಸಾಮಾಜಿಕ ಅಭಿವೃದ್ಧಿ ವಲಯಕ್ಕೆ ಹಣಕಾಸಿನ ಮುಗ್ಗಟ್ಟು ಉಂಟಾಗುತ್ತಿದೆ. ಇದರಿಂದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಮೇಲೆ ಹೊಡೆತ ಬೀಳಲಿದೆ.
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಶನಿವಾರ ಶನಿ ಚರ್ಚೆ ನಡೆಸಿದ ವಿವಿಧ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಉನ್ನತ ಅಧಿಕಾರಿಗಳು, ರಾಜ್ಯ ಸರ್ಕಾರಗಳು ಘೋಷಿಸುವ ಹಲವು ಉಚಿತ ಯೋಜನೆಗಳು ದೇಶದ ಆರ್ಥಿಕ ಭದ್ರ ಬುನಾದಿಯನ್ನೇ ಅಲುಗಿಸುತ್ತಿದೆ ಎಂದು ಆತಂಕ ಹೊರಹಾಕಿದ್ದಾರೆ ಎನ್ನಲಾಗಿದೆ. ದೇಶದ ಆರ್ಥಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜಕಾರಣಿಗಳು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ :- ಆಂಧ್ರಪ್ರದೇಶದಲ್ಲಿ 13 ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ – ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆ