ಬಳ್ಳಾರಿ: ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಸೊಂಕಿಗೆ ಒಳಗಾಗಿ ಹೋಂ ಐಸೋಲೇಶನ್ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ತೀವ್ರ ನಿಗಾವಹಿಸಿ ಅವರನ್ನು ಹೊರಗೆ ತಿರುಗಾಡದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸೂಚನೆ ನೀಡಿದ್ದಾರೆ.
ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲಿ ನಡೆದ ಕೋವಿಡ್ ತುರ್ತು ಪರಿಸ್ಥಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಂ ಐಸೋಲೇಶನ್ ಇದ್ದವರನ್ನು ಹೊರಗಡೆ ಬಿಡುವುದರಿಂದ ಸೊಂಕು ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಇದರ ಮೇಲ್ವಿಚಾರಣೆ ಹೊಣೆ ಹೊತ್ತುಕೊಂಡ ತಾಲೂಕು ಆರೋಗ್ಯ ಅಧಿಕಾರಿಗಳು, ರ್ಯಾಪಿಡ್ ರಿಸ್ಪಾನ್ಸ್ ಟೀಂ, ಸಂಬಂಧಿಸಿದ ವೈದ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಿ ಕ್ರಮವಹಿಸಬೇಕು ಎಂದರು.
ಗಡಿಭಾಗದಲ್ಲಿ ತೀವ್ರಕಟ್ಟೆಚ್ಚರ ವಹಿಸಿ:
ಬಳ್ಳಾರಿ ಜಿಲ್ಲೆಯು ಆಂದ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ರಾಜ್ಯವಾಗಿದ್ದು, ಆ ಕಡೆಯಿಂದ ಬರುವ ಮಾರ್ಗಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಆ ಕಡೆಯಿಂದ ಬರುವ ಜನರಿಗೆ ತೀವ್ರ ತಪಾಸಣೆ ನಡೆಸಬೇಕು. ಸ್ವಲ್ಪ ಲಕ್ಷಣಗಳು ಕಂಡುಬಂದರೂ ಸಹ ಅಂತರವನ್ನು ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಬೇಕು ಎಂದು ಸಚಿವ ಸಿಂಗ್ ಸೂಚಿಸಿದರು.
ಕಳೆದ ಬಾರಿ 9 ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿತ್ತು:
ಈ ಬಾರಿ 6 ಚಕ್ಪೋಸ್ಟ್ ಸ್ಥಾಪಿಸಲಾಗಿದೆ. ಅಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿ ಮಾಲಪಾಟಿ ಅವರು ತಿಳಿಸಿದರು.
ಇದುವರೆಗೆ ಜಿಲ್ಲೆಯಲ್ಲಿ 2.64ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ. 40 ಸಾವಿರ ಜನ ಕೋವಿಡ್ ವಾರಿಯರ್ಸ್ ಗಳಿಗೂ ಲಸಿಕೆ ಹಾಕಲಾಗಿದೆ ಎಂದರು.