ಚೆನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕೆಲ ದಿನಗಳ ನಂತರ, ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಶ್ರೀವಿಲ್ಲಿಪುಥೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಸ್.ಡಬ್ಲ್ಯೂ ಮಾಧವರಾವ್ ಅವರು ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕಳೆದ ತಿಂಗಳು ಕೊರೋನಾ ವೈರಸ್ ಸೋಂಕು ತಗುಲಿತ್ತು. ಚುನಾವಣೆಯ ನಂತರ ಅವರು ನಿಧನರಾಗಿದ್ದಾರೆ.
ಮಾಧವ ರಾವ್ ತಮಿಳುನಾಡಿದ ಶ್ರೀವಿಲ್ಲಿಪುಥೂರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಗ್ಗೆ ಎಐಸಿಸಿ ತಮಿಳುನಾಡು ಮತ್ತು ಪುದುಚೆರಿ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ದತ್ ದುಃಖ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಮಾಧವ ರಾವ್ ಅಗಲಿಕೆ ಪಕ್ಷಕ್ಕೂ, ತಮಿಳುನಾಡಿನ ರಾಜಕೀಯಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಸಂಜಯ್ ದತ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡಿನ 38 ಜಿಲ್ಲೆಗಳ 234 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೇ 2ರಂದು ಫಲಿತಾಂಶ ಘೋಷಣೆಯಾಗಲಿದೆ.