ಪೊಲೀಸ್ ಪೇದೆಯೊಬ್ಬರ ಬ್ಯಾಗ್ ಗೆ ಕೈ ಹಾಕಿ 4 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ಕದ್ದ ಘಟನೆ ಚಿಕ್ಕಬಳ್ಳಾಪುರ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ವೈಷ್ಣವಿ ಜ್ಯೂವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದ್ದು. ಕಳ್ಳನ ಕೈ ಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಎಸ್ ಐ ರಾಮಕೃಷ್ಣಪ್ಪ ಅವರ ಬ್ಯಾಗ್ ಗೆ ಕೈ ಹಾಕಿದ ಕಳ್ಳ 4 ಲಕ್ಷ ಮೌಲ್ಯದ ಚಿನ್ನದ ಬಳೆಗಳನ್ನ ಕಳವು ಮಾಡಿ ಪರಾರಿಯಾಗಿದ್ದಾನೆ.
ಎಎಸ್ ಐ ರಾಮಕೃಷ್ಣಪ್ಪ ಎಲ್ ಐ ಸಿ ಪಾಲಿಸಿ ಮೂಲಕ ಬಂದ ಹಣದಲ್ಲಿ ಪತ್ನಿಗೆ ಚಿನ್ನದ ಬಳೆಗಳನ್ನ ಮಾಡಿಸಿದ್ದು, ಹಣ ನೀಡಿ ಚಿನ್ನದ ಬಳೆಗಳನ್ನ ತರಲು ಚಿನ್ನದಂಗಡಿಗೆ ಹೋಗಿದ್ದರು. ಈ ವೇಳೆ ಚಿನ್ನದಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದಿದ್ದ ಕಳ್ಳ ರಾಮಕೃಷ್ಣಪ್ಪ ಜೇಬಿಗೆ ಕೈ ಹಾಕಿ ಚಿನ್ನದ ಬಳೆಗಳನ್ನ ಎಗರಿಸಿದ್ದಾನೆ.
ಅಂಗಡಿಯಿಂದ ಮನೆಗೆ ಹೋಗುವಾಗ ಮಾರ್ಗ ಮಧ್ಯೆ ಅನುಮಾನ ಬಂದು ಚೆಕ್ ಮಾಡಿಕೊಂಡಾಗ ಚಿನ್ನದ ಬಳೆಗಳು ಕಾಣೆಯಾಗಿದ್ದವು. ಇದರಿಂದ ಅನುಮಾನಗೊಂಡು ಮತ್ತೆ ಚಿನ್ನದಂಗಡಿಗೆ ವಾಪಾಸ್ ಬಂದು ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಕಳ್ಳನ ಕೃತ್ಯ ಬಯಲಾಗಿದೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ರಾಮಕೃಷ್ಣಪ್ಪ ದೂರು ದಾಖಲಿಸಿದ್ದಾರೆ.