ಕಾಳಸಂತೆಯಲ್ಲಿ ರೆಮ್ಡಿಸಿವಿಯರ್ ಇಂಜಕ್ಷನ್ ದುಬಾರಿ ಬೆಲೆಗೆ ಮಾರುತ್ತಿದ್ದ ಮೂವರು ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ನಾಲ್ವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಎಸ್ಪಿ ಸೈದುಲ ಅದಾವತ್ ನೇತೃತ್ವದಲ್ಲಿ ಕೌಲ್ ಬಜಾರ್ ಪೊಲೀಸರು ನಡೆಸಿದ ಸಿನಿಮಯ ಮಾದರಿಯ ಕಾರ್ಯಾಚರಣೆಯಲ್ಲಿ ರೆಮ್ಡಿಸಿವಿಯರ್ ಅಕ್ರಮ ಮಾರಾಟ ಜಾಲವನ್ನು ಭೇದಿಸಲಾಗಿದೆ.
ಪೋಲಾ ಹೋಟೇಲ್ ಗ್ರೂಪ್ಸ್ ಮಾಲೀಕರಾದ ಪೋಲಾ ಪ್ರವೀಣ್. ಮರ್ಚೇಡ್ ಮಲ್ಲಿಕಾರ್ಜುನ ಗೌಡ. ವೆಂಕಟೇಶ್ ಮತ್ತು ಕಿಶೋರ್ ಎಂಬುವವರನ್ನು ಬಂಧಿಸಲಾಗಿದ್ದು. ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಲವು ದಿನಗಳ ಹಿಂದೆ ತಲ್ಲಂ ಕಿಶೋರ್ ನನ್ನು ಬಂಧಿಸಿದ್ದ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಬಳ್ಳಾರಿ ಎಸ್ಪಿ ಸೈದುಲ ಅದಾವತ್ ಸಾಮಾನ್ಯ ವ್ಯಕ್ತಿಯಂತೆ ರೆಮ್ಡಿಸಿವಿಯರ್ ಇಂಜೆಕ್ಷನ್ ಖರೀದಿ ನೆಪದಲ್ಲಿ ಹೋಗಿ ಆರೋಪಿಗಳನ್ನು ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಮೆಡಿಕಲ್ ಏಜೆನ್ಸಿಯೊಂದರಿಂದ ರೆಮ್ಡಿಸಿವಿಯರ್ ಖರೀದಿಸಿ ಖಾಸಗಿ ಆಸ್ಪತ್ರೆಗಳ ಸಂಪರ್ಕ ಪಡೆದು ರೋಗಿಗಳಿಗೆ ದುಬಾರಿ ಬೆಲೆಗೆ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.