ಬೆಂಗಳೂರು: ಹಲ್ಲುಗಳ ಹಳದಿತನ ಹಲವರ ಸಮಸ್ಯೆ. ಅಲ್ಲದೇ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆನಿಸಿದೆ. ಹಲ್ಲಿನ ಬಿಳಿ ಬಣ್ಣ ಕೆಲವೊಮ್ಮೆ ಕಳೆಗುಂದುತ್ತದೆ. ಜೀವನ ಶೈಲಿ, ಆಹಾರ ಪದ್ಧತಿ ಮತ್ತು ವಯಸ್ಸಿನ ಕಾರಣಗಳಿಂದ ಹಲ್ಲಿನ ಬಣ್ಣ ಹಳದಿಗೆ ತಿರುಗುತ್ತದೆ. ಈ ಸಮಸ್ಯೆಯನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಕೆಲವು ಪರಿಹಾರಗಳು ಇಲ್ಲಿವೆ.
ನಿಮ್ಮ ಹಲ್ಲುಗಳನ್ನು ಕನಿಷ್ಠವೆಂದರೂ ದಿನಕ್ಕೆ ಎರಡು ಬಾರಿ ಉಜ್ಜಬೇಕು. ಅಂದರೆ ನೀವು ಬೆಳಗ್ಗೆ ತಿಂಡಿ ತಿನ್ನುವ ಮೊದಲು ಹಲ್ಲುಜ್ಜುವುದು ಸಾಮಾನ್ಯ. ಆದರೆ ತಿಂಡಿ ತಿಂದ ನಂತರ ಅಥವಾ ಕಾಫಿ-ಚಹಾ ಇಲ್ಲವೇ ಇನ್ನಾವುದೇ ಪಾನೀಯವನ್ನು ಸೇವಿಸಿದ ನಂತರ ಹಲ್ಲುಜ್ಜಿದರೆ ಉತ್ತಮ. ಇದೇ ಪ್ರಕ್ರಿಯೆಯನ್ನು ರಾತ್ರಿಯ ಊಟ ಮುಗಿದ ನಂತರ ಮಲಗುವ ಮುಂಚೆ ಮಾಡಿದರೆ ತುಂಬಾ ಒಳ್ಳೆಯದು. ಆದಷ್ಟು ನಿಮ್ಮ ಹಲ್ಲುಗಳನ್ನು ಅಡ್ಡಡ್ಡ ಉಜ್ಜುವ ಬದಲು ವೃತ್ತಾಕಾರವಾಗಿ ಉಜ್ಜುವುದನ್ನು ರೂಡಿ ಮಾಡಿಕೊಳ್ಳಿ.
ಹೆಚ್ಚಿನ ನೀರಿನ ಅಂಶ ಹೊಂದಿರುವ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಚವಾಗಿ ಸೇವಿಸುವುದು. ಜಾಸ್ತಿ ನೀರಿನ ಅಂಶ ಹೊಂದಿರುವ ಹಣ್ಣು ಮತ್ತು ತರಕಾರಿಗಳು ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡದಲ್ಲಿ ಹಲ್ಲುಗಳನ್ನು ಬಿಳಿಯಾಗಿಸುವ ನೈಸರ್ಗಿಕ ಅಂಶಗಳಿರುತ್ತದೆ. ಹಾಗಾಗಿ, ಇದನ್ನು ಟೂಥ್ಪೇಸ್ಟ್ಗಳಲ್ಲಿ ಕೂಡ ಬಳಸಲಾಗುತ್ತದೆ. ಅಡುಗೆ ಸೋಡದಿಂದ ಹಲ್ಲುಜ್ಜುವುದರಿಂದ ಹಲ್ಲಿನ ಮೇಲಿನ ಕಲೆಗಳು ದೂರವಾಗುತ್ತದೆ. ಅಷ್ಟೇ ಅಲ್ಲದೆ, ಅಡುಗೆ ಸೋಡ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಇದ್ದಿಲು ಚೂರುಗಳಿಂದ ಅಥವಾ ಇದ್ದಲು ಪುಡಿಯಿಂದ ಹಲ್ಲುಜ್ಜುವುದು, ಕಿತ್ತಳೆ, ಲಿಂಬು ಅಥವಾ ಬಾಳೆಹಣ್ಣು ಸಿಪ್ಪೆಯಿಂದ ಹಲ್ಲುಗಳನ್ನು ತಿಕ್ಕುವುದು ಇತ್ಯಾದಿ ಹಲ್ಲುಗಳನ್ನು ಬಿಳಿಯಾಗಿಸುತ್ತದೆ ಎಂಬುದು ಹಿರಿಯರ ನಂಬಿಕೆ.
ಹಲವಾರು ಯುಗಗಳಿಂದ ಹಲ್ಲುಗಳನ್ನು ಬಿಳಿಯಾಗಿಸಲು ಉಪ್ಪನ್ನು ಬಳಸಲಾಗುತ್ತಿದೆ. ನಿಮ್ಮ ಟೂತ್ ಪೇಸ್ಟ್ನೊಂದಿಗೆ ಕೂಡ ಇದನ್ನು ಬಳಸಿಕೊಳ್ಳಬಹುದಾಗಿದೆ. ಉಪ್ಪು ನಿಮ್ಮ ಹಲ್ಲುಗಳನ್ನು ಮಾತ್ರ ಬಿಳಿಯಾಗಿಸದೇ ದಂತಕುಳಿ ಸಮಸ್ಯೆಗೂ ಉತ್ತಮ.