ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವನೆಗೆ ಕೆಲವೇ ದಿನಗಳು ಬಾಕಿಯಿವೆ. ಹೀಗಾಗಿ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆದಿದೆ. ತಸ್ಸೌಂಡ್ಸ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಟಿ ಖುಷ್ಬೂ ಸುಂದರ್ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ.
ರೋಡ್ ಶೋ ನಡೆಸುವುದರ ಮೂಲಕ ಬಿಜೆಪಿ ಅಭ್ಯರ್ಥಿ ಖುಷ್ಬೂ ಪರ ಮತ ಯಾಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ತಮಿಳುನಾಡಿನ ಅಭಿವೃದ್ಧಿಯಾಗಲಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಡಿಎಂಕೆ ಮತ್ತು ಕಾಂಗ್ರೆಸ್ನ್ನು ಸೋಲಿಸಿದಾಗ ಮಾತ್ರ ತಮಿಳುನಾಡಿನಲ್ಲಿ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಹೇಳಿದ್ದಾರೆ.
ಒಂದು ಕಾಲದಲ್ಲಿ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡಿದ್ದ ಖುಷ್ಬೂ ಮೊದಲು ಡಿಎಂಕೆಯಲ್ಲಿದ್ದರು. ನಂತರ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಖುಷ್ಬೂ ಇದೀಗ ಕೇಸರಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಇದೇ ಮೊದಲ ಭಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇವರ ಎದುರಾಳಿಯಾಗಿರುವ ಜೀಲಾನ್ ಅವರಿಗೂ ಇದೇ ಮೊದಲ ಚುನಾವಣೆ. ಇದರ ಜತೆಗೆ ಎಎಂಎಂಕೆ, ಕಮಲ ಹಾಸನ್ ನೇತೃತ್ವದ ಎಂಎನ್‍ಎಂ ಹಾಗೂ ಮತ್ತೊಬ್ಬ ಚಿತ್ರನಟ ಸೀಮನ್ ನೇತೃತ್ವದ ಎನ್‍ಟಿಕೆ ಪಕ್ಷದ ಅಭ್ಯರ್ಥಿಗಳಿಗೂ ಇದೆ ಮೊದಲ ಚುನಾವಣೆಯಾಗಿರುವುದರಿಂದ ಈ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ.