ಬೆಂಗಳೂರು: ಬೇಸಿಗೆಯಲ್ಲಿ ಹೆಚ್ಚು ನೀರಿನಾಂಶ ಇರುವ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಬಹುದು. ಕಲ್ಲಂಗಡಿಯಲ್ಲಿ ಶೇ.92 ರಷ್ಟು ನೀರಿನಾಂಶವಿದೆ. ಹೀಗಾಗಿ ಇದನ್ನು ಸೇವಿಸುವುದರಿಂದ ಹಿತವೆನಿಸುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಕಲ್ಲಂಗಡಿ ಹಣ್ಣಿನ ತಿರುಳು ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ದೂರವಾಗಿಸಬಹುದು.
ಕಲ್ಲಂಗಡಿ ಹಣ್ಣಿನ ಸಿಪ್ಪೆ ಮತ್ತು ಬೀಜದಲ್ಲಿಯೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ರಸವತ್ತಾದ ಕಲ್ಲಂಗಡಿ ಬಹಳಷ್ಟು ಬೀಜಗಳನ್ನು ಹೊಂದಿರುತ್ತದೆ, ಇದನ್ನು ನಾವು ಸಾಮಾನ್ಯವಾಗಿ ತಿರುಳಿನಿಂದ ಬೇರ್ಪಡಿಸಿ ಬಳಿಕ ಎಸೆದು ಬಿಡುತ್ತೇವೆ. ಈ ಬೀಜಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿವೆ.
ಮೆಗ್ನೀಸಿಯಮ್ ಇರುವ ಕಾರಣ ಈ ಬೀಜಗಳು ಅಧಿಕ ರಕ್ತದೊತ್ತಡವನ್ನು ಸಹಾ ಸಾಮಾನ್ಯ ಮಟ್ಟಕ್ಕೆ ತರಲು ನೆರವಾಗುತ್ತವೆ, ಇದು ಹೃದಯದ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಕಲ್ಲಂಗಡಿ ಬೀಜಗಳನ್ನು ಪ್ರತಿದಿನ ಕೊಂಚ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ
ಅಮೈನೋ ಆಮ್ಲಗಳು, ಪ್ರೋಟೀನುಗಳ್ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿಂದ ಸಮೃದ್ಧವಾಗಿವೆ.ಈ ಎಲ್ಲಾ ಪೋಷಕಾಂಶಗಳು ಒಟ್ಟಾಗಿ ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿ ಬೀಜಗಳು ಆರೋಗ್ಯಕರ ಕೊಬ್ಬಿನಾಮ್ಲಗಳಾದ ಒಲಿಕ್ ಆಮ್ಲ, ಲಿನೋಲಿಯಮ್ ಆಮ್ಲದ ಉತ್ತಮ ಮೂಲವಾಗಿದ್ದು, ಇವು ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾಗಿವೆ.
ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಂಡರೆ ತ್ವಚೆ ಕಾಂತಿಯುತವಾಗಿ ಕಂಗೊಳಿಸುತ್ತದೆ. ಹೀಗೆ ನಿಯಮಿತವಾಗಿ ಮಾಡುವುದರಿಂದ ಮುಖದಲ್ಲಿರುವ ಕಲೆಗಳು ಮಾಯವಾಗಿ ತ್ವಚೆ ಹೊಳೆಯುವಂತೆ ಮಾಡುತ್ತದೆ.
ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಉರಿಯೂತದಿಂದ ಶರೀರದ ಯಾವುದಾದರೊಂದು ಭಾಗದಲ್ಲಿ ಬಾವು ಕಾಣಿಸಿಕೊಂಡರೆ, ಮುಕ್ಕಾಲು ಕಪ್ ಬಿಸಿ ನೀರಿಗೆ ಒಂದು ಚಮಚ ಈ ಪುಡಿ, ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕಲಸಿ ದಿನಕ್ಕೆರಡು ಬಾರಿ ಕುಡಿಯಬೇಕು. ಇದರಿಂದ ಬಾವು ಕಡಿಮೆಯಾಗುತ್ತದೆ.
ಸಿಟ್ರುಲೈನ್ ಎನ್ನುವ ಅಮಿನೋ ಆಮ್ಲವನ್ನು ಹೊಂದಿರುವಂತಹ ಇದು ಅಧಿಕ ರಕ್ತದೊತ್ತಡ ನಿವಾರಣೆ ಮಾಡಲು ಸಹಕಾರಿ ಹಾಗೂ ನೈಟ್ರಿಕ್ ಆಕ್ಸೈಡ್ ನ ಉತ್ಪತ್ತಿಯನ್ನು ಹೆಚ್ಚಿಸುವುದು. ರಕ್ತದೊತ್ತಡ ಸಮತೋಲನದಲ್ಲಿಡಲು ಇದು ಸಹಕಾರಿ.