ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿಯುತ್ತಿದ್ದಂತೆ ಪಕ್ಷದಲ್ಲಿ ಲಾಬಿ ಆರಂಭಗೊಂಡಿದ್ದರೆ, ಮತ್ತೊಂದೆಡೆ ಹೈಕಮಾಂಡ್ ಹೊಸ ಮುಖದ ಹುಡುಕಾಟ ಆರಂಭಿಸಿದೆ.
ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಆರ್ ಎಸ್ ಎಸ್ ಮುಖಂಡ ಬಿಎಲ್ ಸಂತೋಷ್, ಮುರುಗೇಶ್ ನಿರಾಣಿ, ಲಕ್ಷ್ಮಣ್ ಸವದಿ, ಶ್ರೀರಾಮುಲು, ಅಶ್ವಥ್ ನಾರಾಯಣ, ಆರ್.ಅಶೋಕ್, ಅರವಿಂದ್ ಬೆಲ್ಲದ್, ಉಮೇಶ್ ಕತ್ತಿ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಪೈಪೋಟಿಗೆ ಇಳಿದಿದ್ದಾರೆ.
ಬಿಎಸ್ ವೈ ರಾಜೀನಾಮೆ ನೀಡುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುರ್ತು ಸಭೆ ಕರೆದಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ಆರಂಭಿಸಿದ್ದಾರೆ. ಇದೇ ವೇಳೆ ರಾಜ್ಯದ ಹಲವು ನಾಯಕರಿಗೆ ಬುಲಾವ್ ನೀಡಿದ್ದಾರೆ.
ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಷಿ ಈಗಾಗಲೇ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಬಿ.ಎಲ್. ಸಂತೋಷ್ ಅವರಿಗೆ ಹೈಕಮಾಂಡ್ ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ ಬಿಎಸ್ ವೈ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ರಹಿತ, ಕಳಂಕ ರಹಿತ ಹಾಗೂ ಹೊಸ ಮುಖದ ಹುಡುಕಾಟದಲ್ಲಿ ಹೈಕಮಾಂಡ್ ಇದ್ದು, ಅನಿರೀಕ್ಷಿತ ವ್ಯಕ್ತಿ ಸಿಎಂ ಸ್ಥಾನಕ್ಕೇರುವ ಸಾಧ್ಯತೆ ಇದೆ.