ಕೆಳ ಕ್ರಮಾಂಕದಲ್ಲಿ ಸ್ನೇಹ ರಾಣಾ ಮತ್ತು ಪೂಜಾ ವಸ್ತ್ರಾಕರ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 108 ರನ್ ಗಳ ಭಾರೀ ಅಂತರದಿಂದ ಸೋಲುಣಿಸಿದೆ.
ಮೌಂಟ್ ಮೌಂಗುನಾಯ್ ನಲ್ಲಿ ಭಾನುವಾರ ನಡೆದ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಗೆ 244 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಾಕಿಸ್ತಾನ ತಂಡ ರಾಜೇಶ್ವರಿ ಗಾಯಕ್ವಾಡ್ ಮಾರಕ ದಾಳಿಗೆ ತತ್ತರಿಸಿ 43 ಓವರ್ ಗಳಲ್ಲಿ 137 ರನ್ ಗೆ ಆಲೌಟಾಗಿದೆ.
ಈ ಮೂಲಕ ಭಾರತ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ 11 ಪಂದ್ಯಗಳ ಪೈಕಿ 11ರಲ್ಲೂ ಗೆಲುವು ದಾಖಲಿಸಿ ಅಜೇಯ ದಾಖಲೆ ಮುಂದುವರಿಸಿತು.
ಪೈಪೋಟಿಯ ಮೊತ್ತ ಬೆಂಬತ್ತಿದ ಪಾಕಿಸ್ತಾನ ತಂಡ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು. ತಂಡದ ಪರ ಸಿದ್ರಾ ಅಮೆನ್ (30) ಸ್ವಲ್ಪಮಟ್ಟಿಗೆ ಪ್ರತಿರೋಧ ಒಡ್ಡಿದರು. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಪಡೆದು ಮಿಂಚಿದರು. ಸ್ನೇಹ ರಾಣಾ, ಜೂಲಾನ್ ಗೋಸ್ವಾಮಿ ತಲಾ 2 ವಿಕೆಟ್ ಪಡೆದರು.
ಭಾರತ ತಂಡ ಒಂದು ಹಂತದಲ್ಲಿ 114 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಸ್ನೇಹ ರಾಣಾ ಮತ್ತು ಪೂಜಾ 7ನೇ ವಿಕೆಟ್ ಗೆ 82 ರನ್ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಸ್ನೇಹ 48 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 53 ರನ್ ರನ್ ಬಾರಿಸಿ ಔಟಾಗದೇ ಉಳಿದರೆ, ಪೂಜಾ ವಸ್ತ್ರಾಕರ್ 59 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 67 ರನ್ ಸಿಡಿಸಿದರು.