ಪಶ್ಚಿಮ ಬಂಗಾಳದಲ್ಲಿನ ಸೋಲು ನಿಮಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರ್ಧಗಂಟೆ ಕಾಯಿಸಿದೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಯಾಸ್ ಚಂಡಮಾರುತದಿಂದ ಆದ ನಷ್ಟದ ಕುರಿತು ಪ್ರಧಾನಿ ಮೋದಿ ನಿನ್ನೆ ಕರೆದಿದ್ದ ಪರಾಮರ್ಶೆ ಸಭೆಗೆ ಮಮತಾ ಬ್ಯಾನರ್ಜಿ ಉದ್ದೇಶಪೂರ್ವಕವಾಗಿ ಅರ್ಧಗಂಟೆ ತಡವಾಗಿ ಬಂದು ಮೋದಿ ಹಾಗೂ ರಾಜ್ಯಪಾಲರನ್ನು ಕಾಯಿಸಿದರು ಎಂದು ವರದಿಗಳು ಪ್ರಸಾರವಾಗಿದ್ದವು.
ನಿನ್ನೆ ಘಟನೆ ಬಗ್ಗೆ ಕೇಂದ್ರ ಸರಕಾರ ಸುಳ್ಳು ಸುದ್ದಿಯನ್ನು ಹರಡಿಸಿದೆ. ಈ ಹಿನ್ನೆಲೆಯಲ್ಲಿ ನಾನು ವಾಸ್ತವವಾಗಿ ಏನು ನಡೆಯಿತು ಎಂದು ಹೇಳಲು ಈ ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಮಮತಾ ಬ್ಯಾಜರ್ಜಿ ಸ್ಪಷ್ಟಪಡಿಸಿದರು.
ಚಂಡಮಾರುತದಿಂದ ಹಾನಿಗೀಡಾದ ಸಾಗರ್ ಮತ್ತು ದಿಶಾ ಪ್ರದೇಶಗಳಿಗೆ ಭೇಟಿ ನೀಡಲು ನಾನು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ದಿಢೀರನೆ ಪ್ರಧಾನಿ ಚಂಡಮಾರುತ ಹಾನಿ ಕುರಿತು ಪರಿಶೀಲನೆಗೆಪಶ್ಚಿಮ ಬಂಗಾಳಕ್ಕೆ ಬರಲಿದ್ದಾರೆ ಎಂದು ತಿಳಿಯಿತು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಕಾರ್ಯಕ್ರಮವನ್ನು ಬದಲಿಸಿಕೊಂಡೆವು ಎಂದು ಅವರು ವಿವರಿಸಿದರು.
ಪ್ರಧಾನಿ ಹೆಲಿಕಾಫ್ಟರ್ ಬರುವುದು 20 ನಿಮಿಷ ತಡವಾಗುತ್ತದೆ ಎಂದು ನಮಗೆ ಮಾಹಿತಿ ನೀಡಲಾಯಿತು. ನಾವು ತಾಳ್ಮೆಯಿಂದ ಕಾದು 20 ನಿಮಿಷದ ನಂತರ ತೆರಳಿದೆವು. ಆದರೆ ಅಷ್ಟರಲ್ಲಿ ಪ್ರಧಾನಿ ಬಂದಿದ್ದರು. ಅಲ್ಲದೇ ಸಭೆ ಕೂಡ ನಡೆಯುತ್ತಿತ್ತು ಎಂದು ಅವರು ಹೇಳಿದರು.
ನಾವು ಸಭಾ ಸ್ಥಳಕ್ಕೆ ಹೋದಾಗ ಸಭೆ ನಡೆಯುತ್ತಿದ್ದು, ಒಳಗೆ ಪ್ರವೇಶವಿಲ್ಲ ಎಂದು ಭದ್ರತಾ ಪಡೆ ಸಿಬ್ಬಂದಿ ಹೇಳಿದರು. ಅಲ್ಲದೇ ಒಂದು ಗಂಟೆ ಕಾಯುವಂತೆ ತಿಳಿಸಿದರು. ನಂತರ ಸಭೆ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯುತ್ತಿದೆ ಎಂದು ತಿಳಿದಾಗ ನಾನು ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರೇ ಒಳಗೆ ಹೋದಾಗ ಪ್ರಧಾನಿ, ಗವರ್ನರ್, ಕೇಂದ್ರ ಸಚಿವರು ಹಾಗೂ ಶಾಸಕರ ಜೊತೆ ಸಭೆ ನಡಸುತ್ತಿದ್ದರು ಎಂದು ಮಮತಾ ನುಡಿದರು.
ನಮಗೆ ಅಲ್ಲಿ ಸುದೀರ್ಘವಾಗಿ ಚರ್ಚೆ ಮಾಡುವ ಅವಕಾಶವಿಲ್ಲ ಎಂಬುದು ತಿಳಿಯಿತು. ಆದ್ದರಿಂದ ನಾವು ಹಾನಿ ಕುರಿತ ವರದಿಯನ್ನು ನೀಡಿ ಮರಳಿದೆವು. ಅದು ಕೂಡ ಪ್ರಧಾನಿ ಅವರಲ್ಲಿ ನಾವು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿದೆ. ಆದ್ದರಿಂದ ತೆರಳುತ್ತೇವೆ ಎಂದು ಮೂರು ಬಾರಿ ಮನವಿ ಮಾಡಿದ ನಂತರ ತೆರಳಿದೆವು ಎಂದು ಮಮತಾ ವಿವರಿಸಿದರು.