ಬೆಂಗಳೂರು: ನಾಳೆ ಯುಗಾದಿ, ಯುಗಾದಿ ಎಂದರೆ ಹೊಸ ವರ್ಷದ ಆರಂಭ. ನಾಡಿನಾದ್ಯಂತ ವಿಶೇಷ ಆಚರಣೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಯುಗದ ಆರಂಭವಾಗುವುದು. ಈ ಶುಭ ದಿನದಂದೇ ಬ್ರಹ್ಮ ದೇವನು ಸೃಷ್ಟಿಯನ್ನು ಆರಂಭಿಸಿದನು ಪ್ರಕೃತಿಯಲ್ಲಿಯೂ ವಿಭಿನ್ನ ಬದಲಾವಣೆಯ ಮೂಲಕ ಹೊಸ ವರ್ಷದ ಆರಂಭವಾಗುವುದು.
ಕರ್ನಾಟಕದಲ್ಲಿ ಯುಗಾದಿಯ ಆಚರಣೆಯನ್ನು ವಿಶೇಷವಾದ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಈ ಸಂಭ್ರಮದ ಒಳಗೆ ವಿವಿಧ ಸಾಂಪ್ರದಾಯಿಕ ಆಚರಣೆಯನ್ನು ಆಚರಿಸಲಾಗುವುದು. ಬೇವು ಬೆಲ್ಲವನ್ನು ನೀಡುವುದು ಹಾಗೂ ಸವಿಯುವುದು ಈ ಹಬ್ಬದ ವಿಶೇಷ ಸಂಗತಿ.
ಹಿಂದೂ ಪಂಚಾಂಗದಲ್ಲಿ ಹೊಸ ದಿನದ ಆರಂಭವಾಗುವ ಈ ದಿನವನ್ನು ಗ್ರಾಮೀಣ ಪ್ರದೇಶದಲ್ಲೂ ವಿಶೇಷವಾಗಿ ಆಚರಿಸಲಾಗುವುದು. ಯುಗಾದಿಯ ಹಬ್ಬದಲ್ಲಿ ಬೇವಿನ ಎಲೆ, ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಕಾಯಿ ಸೇರಿದಂತೆ ಇನ್ನಿತರ ವಸ್ತುಗಳು ಹಾಗೂ ಖಾದ್ಯಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಯುಗಾದಿಯಂದು ಬೆಳಗ್ಗೆ ಬೇಗ ಎದ್ದು ಮನೆಯ ಮುಂದೆ ಸಾರಿಸಿ ಚೆಂದದ ರಂಗೋಲಿ ಇಡಬೇಕು. ಅಲ್ಲದೇ, ಯುಗಾದಿಯಂದು ಮಾಡುವ ವಿಶೇಷ ಅಭ್ಯಂಜನ ಸ್ನಾನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಯುಗಾದಿಯಂದು ದೇವರಿಗೆ ಪೂಜೆ ಮಾಡಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೈವೇದ್ಯ ತೋರಿಸಬೇಕು. ಇದರಿಂದ ದೇವರು ಸಂತುಷ್ಠರಾಗುತ್ತಾರೆ ಎಂಬ ನಂಬಿಕೆಯಿದೆ. ಹೊಸ ಬಟ್ಟೆಗಳನ್ನು ಧರಿಸಿ ದೇವರ ಮತ್ತು ಹಿರಿಯರ ಆಶೀರ್ವಾದ ಪಡೆಯುವುದು ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿ.
ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು. ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು. ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು.
ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇವೆ.