ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನ ಮರದ ಪ್ರತಿ ಭಾಗವೂ ಉಪಯೋಗಕಾರಿ. ತೆಂಗಿನಕಾಯಿ ನೀರು ಕುಡಿಯೋದ್ರಿಂದ ದೇಹ ತಂಪಾಗುತ್ತದೆ. ಗ್ಯಾಸ್ಟ್ರಿಕ್ ನಿವಾರಣೆಯಾಗುತ್ತದೆ. ಎದೆಯುರಿ ಶಮನವಾಗುತ್ತದೆ. ಅಷ್ಟೇ ಅಲ್ಲದೇ ಇದು ಪ್ರಕೃತಿ ದತ್ತವಾಗಿ ಸಿಗುವಂತಹ ಪಾನಿಯವಾಗಿರುವುದರಿಂದ ಇದಕ್ಕೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಬೇಡಿಕೆಯನ್ನ ಹೊಂದಿದೆ. ಈ ತೆಂಗಿಕಾಯಿ ನೀರನ್ನು ಬಳಸಿದ ನಂತರ ಇದರಲ್ಲಿರುವ ಕೊಬ್ಬರಿಯನ್ನು ಮನೆಯಲ್ಲಿ ಅಡುಗೆಗೆ ಬಳಸುತ್ತಾರೆ. ಇದರಿಂದ ಚಟ್ನಿ, ಪುಡಿ, ಪಾಯಸ, ಬರ್ಫಿ, ಮಿಟಾಯಿ ಹೀಗೆ ನಾನಾ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ.
ಇನ್ನು ಈ ಕಾಯಿಯೊಂದಿಗೆ ಬರುವ ಚಿಪ್ಪನ್ನು ಹಿಂದಿನ ಕಾಲದಲ್ಲಿ ನೀರು ಕಾಯಿಸಲು, ಅಡುಗೆಗೆ ಬೆಂಕಿ ತಯಾರಿಸಲು ಅಥವಾ ಗುಬ್ಬಚ್ಚಿಗಳಿಗೆ ನೀರು ಆಹಾರವನ್ನು ಶೇಖರಿಸಲು ಬಳಸುತ್ತಿದ್ದರು. ಆದರೀಗ ಕಾಲ ಬದಲಾಗಿದೆ, ಕಸದಿಂದ ರಸ ಎನ್ನುವಂತೆ ಈ ಚಿಪ್ಪಿನಿಂದ ಹಲವಾರು ಕಲಾಕೃತಿಗಳನ್ನು ಮಾಡುತ್ತಾರೆ. ಉದಾಹರಣೆಗೆ, ಚಹಾ ಸೇವಿಸಲು ಕಪ್ ತಯಾಸುತ್ತಾರೆ, ಮನೆಯ ಅಲಂಕಾರಕ್ಕೆ ಗೊಂಬೆಗಳನ್ನು ತಯಾರಿಸುತ್ತಾರೆ, ಜೊತೆಗೆ ಅಲಂಕಾರಿಕ ಬಲ್ಬನ್ನೂ ಕೂಡಾ ಈ ಚಿಪ್ಪನ್ನು ಬಳಸಿ ತಯಾರಿಸುವ ಮೂಲಕ ತಮ್ಮ ಮನೆಯ ಅಂದವನ್ನ ಹೆಚ್ಚಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ.
ಈಗ ಅದಕ್ಕೂ ಮೀರಿ ಈ ಕಸದಿಂದ ಆರೋಗ್ಯಕ್ಕೂ ಲಾಭ ಇದೆ ಎಂಬುದನ್ನ ತಿಳಿಸುವುದೇ ಇವತ್ತಿನ ವಿಶೇಷತೆಯಾಗಿದೆ. ಕಾಯಿ ತುರಿದ ನಂತರ ಚಿಪ್ಪಿನಿಂದ ಏನೂ ಪ್ರಯೋಜನವಿಲ್ಲ ಎಂದು ಕಸಕ್ಕೆ ಹಾಕುವ ಮುನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಸಾಕಷ್ಟಿದೆ. ತೆಂಗಿನ ಚಿಪ್ಪನ್ನು ಸುಟ್ಟು ಅದರ ಬೂದಿಯನ್ನು ಜರಡಿಯಲ್ಲಿ ಸೋಸಿದ ನಂತರ ದೊರೆತ ನುಣ್ಣನೆಯ ಪುಡಿಯನ್ನು ತೆಂಗಿನ ಎಣ್ಣೆಯ ಜೊತೆ ತಲೆಗೆ ಹಚ್ಚಿದರೆ ಕೂದಲು ಉದುರುವ, ತಲೆ ಹೊಟ್ಟಿನ ಸಮಸ್ಯೆಗೆ ಗುಡ್ ಬೈ ಹೇಳಿದ ಹಾಗೆ. ಇನ್ನೂ ಇದೇ ತೆಂಗಿನ ಚಿಪ್ಪಿನ ಬೂದಿಗೆ ಸ್ವಲ್ಪ ಉಪ್ಪು ಹಾಗೂ ಬೇವಿನ ಎಣ್ಣೆ ಬೆರೆಸಿ ನಿಯಮಿತವಾಗಿ ಹಲ್ಲುಜ್ಜಿದರೆ ದಂತಕ್ಷಯ ಸಮಸ್ಯೆಯೂ ಬರುವುದಿಲ್ಲ.