ನವದೆಹಲಿ : ಉತ್ತರಾಖಂಡ್‍ನಲ್ಲಿ ಭಾರೀ ಮಳೆಯಾಗುತ್ತಿದ್ದು ಹವಾಮಾನ ವೈಪರಿತ್ಯದಿಂದಾಗಿ ಅಮರನಾಥ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ್‍ನ 23 ಯಾತ್ರಿಕರು ಅಮರನಾಥನ ದರ್ಶನ ಪಡೆದು ವಾಪಸ್ ಬರುವಾಗ ಮಾರ್ಗ ಮಧ್ಯೆ ಗುಡ್ಡ ಕುಸಿದಿದ್ದು, ಅಮರನಾಥ ಮಂದಿರದಿಂದ 6 ಕಿ.ಮೀ. ದೂರದ ಪಂಚತಾರ್ನಿ ಟೆಂಟ್‍ನಲ್ಲಿ 83 ಕನ್ನಡಿಗರು ಪರದಾಡುತ್ತಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಉತ್ತರಾಖಂಡ್ ಪ್ರಾದೇಶಿಕ ಆಯುಕ್ತರು, ಡಿಸಿಗಳು, ಪೊಲೀಸರ ಜೊತೆ ಮಾತನಾಡಿದ್ದೇನೆ. ಕರ್ನಾಟಕದ ಯಾತ್ರಿಕರು ಸುರಕ್ಷಿತವಾಗಿದ್ದಾರೆ. ನೆರವಿಗೆ ಐಎಎಸ್ ಅಧಿಕಾರಿ ರಶ್ಮಿ ನಿಯೋಜಿಸಿದ್ದೇನೆ ಎಂದು ಹೇಳಿದ್ದಾರೆ.
ಸರ್ಕಾರ ಈಗಾಗಲೇ 1070 ಸಹಾಯವಾಣಿ ಆರಂಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಕಮಿಷನರ್ ಸತೀಶ್ ಕೂಡ ಅಲ್ಲಿನ ಕನ್ನಡಿಗರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಉಳಿದವರು ಯಾವ್ಯಾವ ಜಿಲ್ಲೆಯವರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಸದ್ಯಕ್ಕೆ ಎಲ್ಲರೂ ಮಿಲಿಟರಿ ಕ್ಯಾಂಪ್‍ನಲ್ಲಿ ಸೇಫ್ ಆಗಿದ್ದಾರೆ.
ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಬಾಲ್ತಾಲ್, ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ ಅಮರನಾಥ ಯಾತ್ರೆ ರದ್ದು ಮಾಡಲಾಗಿದೆ. ಉತ್ತರಾಖಂಡ್‍ನ ಪಿಥೋರ್‍ಗಡ್‍ನಲ್ಲಿ ಮೇಘಸ್ಫೋಟ ಸಂಭವಿಸಿ ಸಿಲುಕಿದ್ದ 300ಕ್ಕೂ ಹೆಚ್ಚು ಯಾತ್ರಿಕರನ್ನು ರಕ್ಷಿಸಲಾಗಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.