ನವದೆಹಲಿ : ಇಂದಿನಿಂದ ಹೊಸ ಸಂಸತ್ ಭವನದಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೊಸ ಸಂಸತ್‌ನಲ್ಲಿ ನನ್ನ ಮೊದಲ ಭಾಷಣ ಎಂದು ಸ್ಮರಿಸಿದ್ದಾರೆ. ಇಂದಿನಿಂದ ಬಜೆಟ್ ಅಧಿವೇಶನ ಹಿನ್ನೆಲೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದರು, ಹೊಸ ಸಂಸತ್ ‘ಏಕ ಭಾರತ್ ಶ್ರೇಷ್ಠ ಭಾರತ’ದ ಪರಿಕಲ್ಪನೆ ಇದೆ. ಭಾರತದ ಭವಿಷ್ಯದ ಕನಸುಗಳಿವೆ, ನಮ್ಮ ಸಂಸ್ಕೃತಿಗಳಿವೆ. ಇಲ್ಲಿ ಭಾರತದ ಉಜ್ವಲ ಭವಿಷ್ಯ ನಿರ್ಮಾಣವಾಗಲಿದೆ ಎಂದು ಭಾವಿಸುತ್ತೇನೆ. ಎಲ್ಲ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಕರ್ತವ್ಯ ಪಥದಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪಿಸಿದೆ. ಪ್ರಧಾನಮಂತ್ರಿಗಳ ಮ್ಯೂಸಿಯಂ ಸ್ಥಾಪಿಸಿದೆ. ಬಿರ್ಸಾ ಮುಂಡಾ ಜನ್ಮ ದಿನಕ್ಕೆ ವಿಶೇಷ ಗೌರವ ನೀಡಿದೆ. ಭಾರತದ ಚಂದ್ರನ ದಕ್ಷಿಣ ಧ್ರುವದಲ್ಲಿ ಧ್ವಜ ಹಾರಿಸಿದ ಮೊದಲ ದೇಶವಾಗಿದೆ. ಸೂರ್ಯನತ್ತ ಉಪಗ್ರಹ ಕಳುಹಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ 100 ಕ್ಕೂ ಅಧಿಕ ಪದಕ ಗಳಿಸಿದೆ. ಅಮೃತ್ ಭಾರತ್ ರೈಲ್ವೆ ಆರಂಭವಾಗಿದೆ. ಭಾರತದ ಏರ್ ಕಂಪನಿ ಅತ್ಯಧಿಕ ವಿಮಾನಗಳ ನಿರ್ಮಾಣಕ್ಕೆ ಆರ್ಡರ್ ನೀಡಿದೆ.
ಗುಲಾಮಿ ಕಾಲಘಟ್ಟದ ನ್ಯಾಯ ಪದ್ಧತಿ ಬದಲಾಯಿಸಿದೆ. ಹೊಸ ನ್ಯಾಯಸಂಹಿತೆ ದೇಶಕ್ಕೆ ಸಿಕ್ಕಿದೆ. ಡಿಜಿಟಲ್ ದತ್ತಾಂಶ ಮತ್ತಷ್ಟು ಸುರಕ್ಷಿತವಾಗಿದೆ. ರಾಮಮಂದಿರ ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರ 371 ರದ್ದು ಮಾಡಿದ್ದು ಇತಿಹಾಸವಾಗಿದೆ. ತ್ರಿವಳಿ ತಲಾಕ್ ರದ್ದು ಮಾಡಿದೆ. ಬೇರೆ ದೇಶದಿಂದ ಬರುವ ಅಲ್ಪಸಂಖ್ಯಾತರಿಗೆ ನಾಗರಿಕತೆ ನೀಡಿದೆ. ದೇಶದಲ್ಲಿ ಮೊದಲ ಬಾರಿಗೆ ಸಿಡಿಎಸ್ ನೇಮಕವಾಗಿದೆ ಎಂದು ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಬಡತನ ನಿರ್ಮೂಲನೆ ಬಗ್ಗೆ ಕೇಳ್ತಾ ಬಂದಿದ್ದೆವು. ಈಗ ಅದನ್ನು ನೋಡುತ್ತಿದ್ದೇವೆ. ನೀತಿ ಆಯೋಗದ ಮಾಹಿತಿ ಪ್ರಕಾರ, 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಟಾಪ್ 5 ಆರ್ಥಿಕತೆಯಲ್ಲಿ ಭಾರತ ಸೇರಿಕೊಂಡಿದೆ. ಎಫ್‌ಡಿಐ ದ್ವಿಗುಣಗೊಂಡಿದೆ. ಖಾದಿ ಉತ್ಪಾದನೆ ಮತ್ತು ಮಾರಾಟದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ದಶಕದ ಹಿಂದೆ ಕೆಲವೇ ಕೆಲವು ಸ್ಟಾರ್ಟ್‌ಅಪ್‌ಗಳಿದ್ದವು. ಈಗ ಒಂದು ಲಕ್ಷಕ್ಕೂ ಅಧಿಕ ಸ್ಟಾರ್ಟ್ಅಪ್‌ಗಳಿವೆ ಎಂದು ತಿಳಿಸಿದ್ದಾರೆ.
ಜಿಎಸ್‌ಟಿಯಿಂದ ಒಂದು ದೇಶ ಒಂದು ಟ್ಯಾಕ್ಸ್ ಕಲ್ಪನೆ ಸಕಾರಗೊಂಡಿದೆ. ಭಾರತದಲ್ಲಿ ಮೂಬೈಲ್ ತಯಾರಿಕೆ ಹೆಚ್ಚಳವಾಗಿದೆ. ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಅವು ಭಾರತದಲ್ಲಿ ನಿರ್ಮಾಣವಾಗುತ್ತಿವೆ. ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಹಲವು ಯುದ್ಧ ವಿಮಾನಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ವಿಮಾನದ ಇಂಜಿನ್ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣವಾಗಿದೆ ಎಂದು ಮಾತನಾಡಿದ್ದಾರೆ.