ದೆಹಲಿ : ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ತಮ್ಮನ್ನು ಸುತ್ತುವರೆದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ , ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರತಿಭಟನೆಯನ್ನು ಕರ್ನಾಟಕದ ಬಿಜೆಪಿ ನಾಯಕರು ಸ್ಟಂಟ್ ಅಂತಾದ್ರೂ ಹೇಳಲಿ ಅಥವಾ ಮತ್ತೇನಾದರೂ ಹೇಳಲಿ, ಅದನ್ನು ತಾವು ಗಣನೆಗೆ ತೆಗೆದುಕೊಳ್ಳೋದಿಲ್ಲ, ವಿಧಾನ ಸಭೆಯಲ್ಲಿ ತಮ್ಮ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.
ಬಿಜೆಪಿಯವರು ಜನರ ಭಾವನೆಗಳೊಂದಿಗೆ ಆಡುತ್ತಿದ್ದಾರೆ ಮತ್ತು ನಾವು ಜನರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿದ್ದೇವೆ, ಗ್ಯಾರಂಟಿಗಳಿಂದಾಗಿ ಖಜಾನೆ ಖಾಲಿಯಾಗಿದೆ ಅಂತ ಅವರು ಹೇಳುತ್ತಿದ್ದಾರೆ, ಆದರೆ ಅಂಥದ್ದೇನೂ ಇಲ್ಲ, ಹೇಗೆ ಸರ್ಕಾರ ನಡೆಸುವುದು ಅಂತ ನಮಗೆ ಗೊತ್ತು ಎಂದು ಹೇಳಿದ ಶಿವಕುಮಾರ್, ತಮ್ಮ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕೀಳಾಗಿ, ಕೇವಲವಾಗಿ ಮಾತಾಡುವ ಬಿಜೆಪಿ ನಾಯಕರು ತಾವ್ಯಾಕೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಲಲ್ಲಿ ಗ್ಯಾರಂಟಿಗಳನ್ನು ಘೋಷಿಸಿದರು ಎಂದು ಪ್ರಶ್ನಿಸಿದರು.