ಬೆಂಗಳೂರು : ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಸರಣಿಯ ಕೊನೆಯ ಟಿ20 ಪಂದ್ಯ ಇಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಅಫ್ಘಾನಿಸ್ತಾನ್ ತಂಡವು ಕೊನೆಯ ಮ್ಯಾಚ್ನಲ್ಲಿ ಗೆಲ್ಲುವ ಮೂಲಕ ವೈಟ್ ವಾಶ್ ತಪ್ಪಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಬೆಂಗಳೂರು ಮೈದಾನದಲ್ಲಿ ಇಂದು ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಸರಣಿ ಗೆದ್ದಿರುವ ಟೀಮ್ ಇಂಡಿಯಾ :
ಅಫ್ಘಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಭಾರತ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ, ಇಂದೋರ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿತು. ಇದೀಗ ಮೂರನೇ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆಲ್ಲುವ ವಿಶ್ವಾಸದಲ್ಲಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.
ಉಭಯ ತಂಡಗಳು ಈ ಕೆಳಗಿನಂತಿದೆ :
ಭಾರತ ಟಿ20 ತಂಡ : ರೋಹಿತ್ ಶರ್ಮಾ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ತಿಲಕ್ ವರ್ಮಾ , ರಿಂಕು ಸಿಂಗ್ , ಅಕ್ಷರ್ ಪಟೇಲ್ , ಅರ್ಷದೀಪ್ ಸಿಂಗ್ , ಅವೇಶ್ ಖಾನ್ , ಕುಲ್ದೀಪ್ ಯಾದವ್ , ಮುಕೇಶ್ ಕುಮಾರ್ , ಜಿತೇಶ್ ಶರ್ಮಾ , ಶಿವಂ ದುಬೆ, ವಾಷಿಂಗ್ಟನ್ ಸುಂದರ್, ವಿರಾಟ್ ಕೊಹ್ಲಿ.
ಅಫ್ಘಾನಿಸ್ತಾನ್ ತಂಡ : ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ (ನಾಯಕ) , ಹಝರತುಲ್ಲಾ ಝಝೈ , ನಜಿಬುಲ್ಲಾ ಝದ್ರಾನ್ , ಮೊಹಮ್ಮದ್ ನಬಿ , ಅಜ್ಮತುಲ್ಲಾ ಒಮರ್ಝೈ , ಮುಜೀಬ್ ಉರ್ ರಹಮಾನ್ , ಶರಫುದ್ದೀನ್ ಅಶ್ರಫ್ , ಖೈಸ್ ಅಹ್ಮದ್ , ನವೀನ್ -ಉಲ್-ಹಕ್, ಫಝಲ್ ಹಕ್ ಫಾರೂಖಿ, ನೂರ್ ಅಹ್ಮದ್, ಮೊಹಮ್ಮದ್ ಸಲೀಂ ಶಫಿ, ಕರೀಂ ಜನತ್ , ಇಕ್ರಮ್ ಅಲಿಖಿಲ್ , ಫರೀದ್ ಅಹ್ಮದ್ ಮಲಿಕ್ , ರಹಮತ್ ಶಾ , ಗುಲ್ಬದಿನ್ ನೈಬ್.