Political NewsState News

ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರ ಧರಣಿ, ಪ್ರತಿಭಟನೆ: ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು : ರಾಜ್ಯ ಸರ್ಕಾರ ಸರ್ವಾಧಿಕಾರಿ ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಧರಣಿ ನಿರತ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಸ್ಪೀಕರ್ ಕಚೇರಿ ಹಾಗೂ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೇಲೆ ಬಿಜೆಪಿ ಜೆಡಿಎಸ್ ಸದಸ್ಯರೊಂದಿಗೆ ಧರಣಿ ನಡೆಸಿದರು. ಪೊಲೀಸರು ಧರಣಿ ನಿರತರನ್ನು ವಶಕ್ಕೆ ಪಡೆದರು.

ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ 17,18 ರಂದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ದಲ್ಲಿ ರಾಜ್ಯದ ಐಎಎಸ್ ಅಧಿಕಾರಿಗಳನ್ನು ಗುಮಾಸ್ತರನ್ನಾಗಿ ಮಾಡಿ ಪ್ರೊಟೊಕಾಲ್ ಇಲ್ಲದವರಿಗೂ ಪಿಎ ಥರಾ ಕೆಲಸ ಮಾಡುವಂತೆ ಮಾಡಿದ್ದಾರೆ. ಯಾರು ರಾಜ್ಯದ ಗೆಸ್ಟ್ ಅಂತ ಇರುತ್ತಾರೊ ಅವರಿಗೆ ಗೌರವ ಸಲ್ಲಿಸಲು ಪ್ರೊಟೊಕಾಲ್ ಅಧಿಕಾರಿಗಳು ಇದ್ದಾರೆ. ಅವರ ಬದಲು ಹಿರಿಯ ಐಎಎಸ್ ಅಧಿಕಾರಿಗಳಿಗೆ ರಾಜಕಾರಣಿಗಳನ್ನು ಬಾಗಿಲು ಕಾಯಲು ಹಚ್ಚಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೆಲೆ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ. ಸ್ಪಿಕರ್‌ಸ್ಥಾನ ದುರುಪಯೋಗ ಆಗಿದೆ. ಸ್ಪೀಕರ್ ಅವರು ಆಡಳಿತ ಪಕ್ಷದ ಕೈಗೊಂಬೆಯಾಗಿದ್ದಾರೆ. ನಾವು ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಸದಸ್ಯರಿಗೆ ಊಟಕ್ಕೆ ಬಿಡದೆ ಸದನ ನಡೆಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹಿಟ್ಲರ್ ಶಾಹಿ ಆಡಳಿತ ನಡೆಸಿದ್ದಾರೆ. ಸ್ಪೀಕರ್ ಕಾಂಗ್ರೆಸ್ ನವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಸ್ಪೀಕರ್ ಕುರ್ಚಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಪೇಪರ್ ಹರಿದು ಹಾಕಿದ ಉದಾಹರಣೆ ಇದೆ. ಒಬ್ಬ ಸದಸ್ಯರು ಸ್ಪೀಕರ್ ಮುಂದಿನ ಮೈಕ್ ಕಿತ್ತು ಹಾಕಿದ ಉದಾಹರಣೆ ಇದೆ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದು ಹೊಗಿರುವುದು ನಿದರ್ಶನ ಇದೆ. ಇವರು ಪ್ರತಿಪಕ್ಷದ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಕರಾಳ ದಿನ. ಇದರ ವಿರುದ್ದ ನಾವು ಸದನದ ಹೊರಗೂ ಹೋರಾಟ ಮಾಡಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಇದೇ ವೇಳೆ ಉಪ ಸಭಾಧ್ಯಕ್ಷರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ಕಾಂಗ್ರೆಸ್ ನವರ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಉಪ ಸಭಾಧ್ಯಕ್ಷರಿಗೆ ಅವಮಾನ ಮಾಡಿದ್ದಾರೆ.‌ ಸ್ಪೀಕರ್ ಸದನದ ಪರಿಸ್ಥಿತಿಯನ್ನು ನಿಭಾಯಿಸದೇ ಎದ್ದು ಹೋಗಿದ್ದಾರೆ. ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ನವರೇ ಅವರಿಗೆ ಅವಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯದ ಮರ್ಯಾದೆ ಹಾಳು ಮಾಡಿದ ಕಾಂಗ್ರೆಸ್ :
ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ರಾಜಕೀಯ ಸಮಾವೇಶಗಳು ಇದೇ ಮೊದಲ ಬಾರಿಯಲ್ಲ. ಸಾಕಷ್ಟು ಬಾರಿ ಸಮಾವೇಶಗಳು ನಡೆದಿವೆ. ಈ ಸಭೆಗೆ ಬಂದವರು ಅನೇಕರು ಎಂಎಲ್ ಎ, ಎಂಪಿ ಅಲ್ಲಾ, ಪ್ರಧಾನ‌ ಕಾರ್ಯದರ್ಶಿಗಳು ಏರ್ ಪೊರ್ಟ್ ಬಳಿ ನಿಂತು ಅವರನ್ನು ಸ್ವಾಗತ ಮಾಡಿದ್ದಾರೆ‌ ಎಂದು ಆರೋಪಿಸಿದರು. ನೀವು ಅಧಿಕಾರದಲ್ಲಿರುವವರಿಗೆ ನಿಯಮದ ಪ್ರಕಾರ ಗೌರವ ಕೊಡಿ, ಪುಡಿ ಪಾರ್ಟಿಗಳ ಮುಖಂಡರು‌ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರಿಗೆ ಅವರ ರಾಜ್ಯದಲ್ಲಿಯೇ ಮರ್ಯಾದೆ ಇಲ್ಲ. ಜೊಶೆಪ್ ಕರ್ನಾಟಕ ಲೆಜಿಸ್ಲೆಟಿವ್ ಅಂತ ಹಾಕಿದ್ದಾರೆ. ಅವರು ರಾಜ್ಯದ ಶಾಸಕರೆ, ಇವರು ಕರ್ನಾಟಕದ ಮಾನವನ್ನು ರಾಜಕೀಯ ಲಾಭಕ್ಕೆ ಹರಾಜು ಹಾಕುತ್ತಿದ್ದಾರೆ. ಅಧಿಕಾರಿಗಳು ಯಾಕೆ ಅಲ್ಲಿ ಅಟೆಂಡ್ ಆಗಿದ್ದಾರೆ ಅವರಿಗೆ ನೊಟಿಸ್ ಕೊಡಬೇಕು ಎರಡು ದಿನದ ಸಂಬಳ ಕಡಿತ ಮಾಡಬೇಕು. ಸಿಎಸ್ ಅವರು ಏನು ಮಾಡುತ್ತಿದ್ದರು. ಅವರು ಅನುಮತಿ ನೀಡಿದ್ದಾರಾ ಎಂದು ಪ್ರಶ್ನಿಸಿದರು. ಇಲ್ಲಿ ಬರಗಾಲ ಬಿದ್ದು ಸಾಕಷ್ಟು ಕೆಲಸಗಳಿವೆ ಸರ್ಕಾರದ ಕೆಲಸ ಬಿಟ್ಟು ಅಧಿಕಾರಿಗಳು ಅಲ್ಲಿಗೆ ಹೊಗಿ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸರ್ಕಾರ ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿದೆ. ಇದು ಜನರ ತೆರಿಗೆ ಹಣ ನಿಮ್ಮ ಹಣವಲ್ಲ. ರಾಜ್ಯ ಸರ್ಕಾರ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!