ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಶನಿವಾರ 201 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದು, 60 ಜನರು ಗುಣಮುಖರಾಗಿದ್ದಾರೆ.
24 ಗಂಟೆಗಳಲ್ಲಿ 7,060 ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. 15 ಜನ ಸೋಂಕಿತರು ಐಸಿಯುನಲ್ಲಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 833ಕ್ಕೆ ಏರಿಕೆಯಾಗಿದೆ. ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಬ್ಬ ಕೋವಿಡ್ ಸೋಂಕಿತ ಸಾವನ್ನಪ್ಪಿದ್ದಾನೆ. ಸೋಂಕಿನ ಪಾಸಿಟಿವಿಟಿ ದರ ಶೇ.2.84 ದಾಖಲಾಗಿದೆ.
ಮುಂದಿನ ದಿನಗಳಲ್ಲಿ COVID 19 ಪ್ರಕರಣಗಳ ಹೆಚ್ಚಳವಾಗುವ ಸಾಧ್ಯತೆಯಿದ್ದು, ಸಚಿವ ಸಂಪುಟ ಉಪಸಮಿತಿ ನಿರ್ದೇಶನದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳುವ ಸಲುವಾಗಿ ನಗರದ ಪ್ರಮುಖ ಆಸ್ಪತ್ರೆಗಳಲ್ಲಿ COVID 19 ಸೊಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಮೀಸಲು ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ.ಕೆ ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.