ನವದೆಹಲಿ : ಮುಂದಿನ ದಿನಗಳಲ್ಲಿ ತಮಿಳು ನಾಯಕರೊಬ್ಬರು ಭಾರತ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಬಿಜೆಪಿ ಹಿರಿಯ ನಾಯಕರೊಂದಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದ ವೇಳೆ ಮಾತನಾಡಿ , ಮುಂದಿನ ದಿನಗಳಲ್ಲಿ ದೇಶದ ಪ್ರಧಾನಿಯಾಗಿ ತಮಿಳುನಾಡಿನ ನಾಯಕರೊಬ್ಬರನ್ನು ಮಾಡುತ್ತೇವೆಂದು ಹೊಸ ಶಾಕಿಂಗ್ ವಿಚಾರವನ್ನು ತಿಳಿಸಿದ್ದಾರೆ.
ಅಲ್ಲದೇ ಈ ಹಿಂದೆ ಎರಡು ಬಾರಿ ತಮಿಳುನಾಡಿಗೆ ಪ್ರಧಾನಿ ಹುದ್ದೆ ಅವಕಾಶ ಸಿಕ್ಕಿದ್ದು, ಆದರೆ, ಡಿಎಂಕೆಯಿಂದ ಅವಕಾಶ ತಪ್ಪಿತ್ತು. ತಮಿಳುನಾಡಿನಲ್ಲಿ ಬಿಜೆಪಿ 20 ಸೀಟು ಗೆಲ್ಲಬೇಕು. ಮುಂದೆ ತಮಿಳು ನಾಯಕರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಬಗ್ಗೆ ತಮಿಳುನಾಡು ಸಿಎಂ ಎಂ. ಕೆ.ಸ್ಟಾಲಿನ್ ಹೇಳಿದ್ದೇನು :
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ತಮಿಳುನಾಡು ಪ್ರವಾಸ ಕೈಗೊಂಡಿದ್ದ ವೇಳೆ , ಬಿಜೆಪಿ ಕಾರ್ಯಕರ್ತರ ಜೊತೆ ಸಭೆಯಲ್ಲಿ ಮಾತನಾಡಿ, “ಭವಿಷ್ಯದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಆಗುವಂತೆ ಚುನಾವಣೆಯಲ್ಲಿ ಶ್ರಮಿಸಬೇಕು” ಅಂತ ಹೇಳಿದ್ರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ವ್ಯಕ್ತಿ ಮುಂದೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ವಿರುದ್ಧ ಅಮಿತ್ ಶಾಗೆ ಸಿಟ್ಟೇಕೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ, ಒಂದು ವೇಳೆ ತಮಿಳು ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಆಗಬೇಕು ಅನ್ನೋದು ಬಿಜೆಪಿ ಇಚ್ಛೆಯಾದರೆ ಈಗಲೇ ಮಾಡಬಹುದು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸುಂದರ್ ರಾಜನ್ ಅವರು ಇದ್ದಾರೆ. ಕೇಂದ್ರ ಸಚಿವ ಎಲ್. ಮುರುಘನ್ ಇದ್ದಾರೆ ಇವೆಲ್ಲವೂ ಕಟ್ಟುಕಥೆ, ನಿಮಗೆ ಧೈರ್ಯವಿದ್ದರೆ ಈ ಹೇಳಿಕೆಯನ್ನು ಬಹಿರಂಗವಾಗಿ ನೀಡಿ ಅಂತ ಸ್ಟಾಲಿನ್ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.