State News

ಸಿಎಂ ಸಿದ್ದರಾಮಯ್ಯ ನೇತೃತ್ವದ ಜನಸ್ಪಂದನ ಆರಂಭ..!

ಬೆಂಗಳೂರು : ವಿಧಾನಸೌಧ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸಾಗರವೇ ಹರಿದುಬಂದಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

ಇಂದು ಬೆಳಗ್ಗೆಯಿಂದಲೇ ಸಾವಿರಾರು ಜನ ತಮ್ಮ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯನವರ ಬಳಿ ಹೇಳಲು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಖುದ್ದಾಗಿ ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕರಿಸಲಿದ್ದು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ.

ಸಮಸ್ಯೆ ಕಾನೂನುಬದ್ದ, ಪರಿಹಾರ ರೂಪದಲ್ಲಿದ್ದರೆ ಖಂಡಿತ ಬಗೆಹರಿಸುತ್ತೇನೆ..
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೀವಿ. ಮೊದಲನೇ ಜನಸ್ಪಂದನ ಕಾರ್ಯಕ್ರಮ ನ.27ರಂದು ನಡೆದಿತ್ತು. ಕಳೆದ ಬಾರಿ 5 ಸಾವಿರದಷ್ಟು ಅರ್ಜಿಗಳು ಬಂದಿದ್ದವು. ಈ ಪೈಕಿ 98% ಅರ್ಜಿಗಳಿಗೂ ಅಧಿಕಾರಿಗಳ ಪರಿಹಾರ ಮಾಡಿದ್ದಾರೆ. 2% ಮಾತ್ರ ಉಳಿದಿರಬಹುದು. ಅವೂ ಸಹ ಕೆಲವೇ ದಿನಗಳಲ್ಲಿ ಇತ್ಯರ್ಥ ಆಗಲಿದೆ. ಈಗ 10 ಸಾವಿರಕ್ಕೂ ಹೆಚ್ಚು ಜನರ ತಮ್ಮ ಸಮಸ್ಯೆ ಹೊತ್ತು ಬಂದಿದ್ದೀರಿ.

ನಿಮ್ಮ ಸ್ಥಳಕ್ಕೆ ಬಂದು ನಿಮ್ಮನ್ನ ಭೇಟಿ ಮಾಡಿ ಅರ್ಜಿ ಸ್ವೀಕಾರ ಮಾಡ್ತೀನಿ. ಸರ್ಕಾರ ಪರಿಹಾರ ಒದಗಿಸುವ ಕೆಲಸ ಮಾಡುತ್ತೆ. ನಮ್ಮ‌ ಸರ್ಕಾರ ಬಂದ್ಮೇಲೆ 108 ಜನ ಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಸರ್ಕಾರವನ್ನ ಜನರ ಬಳಿ ಕೊಂಡೊಯ್ಯುವುದು ನಮ್ಮ ಉದ್ದೇಶ. ಆಡಳಿತ ಬೆಂಗಳೂರಿನಲ್ಲಿ ಇರಬಾರದು, ಜನರ ಬಳಿ ಇರಬೇಕು. ಜನರಿಗೆ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಉದ್ದೇಶ. ಸಣ್ಣಪುಟ್ಟ ಸಮಸ್ಯೆಗಳನ್ನ ಜನರು ಬೆಂಗಳೂರಿಗೆ ಹೊತ್ತುತರುವ ಪರಿಸ್ಥಿತಿ ಇರಬಾರದು. ಸ್ಥಳೀಯ ಮಟ್ಟದಲ್ಲೇ ಜನರಿಗೆ ಪರಿಹಾರ ಒದಗಿಸುವುದು ನಮ್ಮ ಧ್ಯೇಯ. ರಾಜ್ಯಮಟ್ಟಕ್ಕೆ ನಿಮ್ಮ ಸಮಸ್ಯೆ ಬಂದ್ರೆ ಪರಿಹಾರ ಮಾಡುವ ಪ್ರಯತ್ನ ಮಾಡ್ತೇನೆ. ನಿಮ್ಮ ಸಮಸ್ಯೆ ಕಾನೂನುಬದ್ದ, ಪರಿಹಾರ ಮಾಡುವ ರೂಪದಲ್ಲಿದ್ದರೆ ಖಂಡಿತ ಬಗೆಹರಿಸುತ್ತೇನೆ ಎಂದರು.

ಆಡಳಿತ ಚುರುಕಾಗಲು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೇವಲ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಇದು ಬಡವರ ಕಾರ್ಯಕ್ರಮ. ಎಲ್ಲರಲ್ಲೂ ಸಮಾನತೆ ತರಲು ಈ ಕಾರ್ಯಕ್ರಮ ಮಾಡ್ತಿದ್ದೇವೆ. ಗ್ಯಾರಂಟಿಗಳು ತಲುಪುವಲ್ಲಿ ಸಮಸ್ಯೆ ಆಗಿದ್ದರೆ ದೂರು ನೀಡಬಹುದು. ನಿಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಷ್ಕರಿಸುವ ಕೆಲಸ ಮಾಡ್ತಾರೆ ಎಂದು ಸಿಎಂ ತಿಳಿಸಿದರು. ಭಾಷಣದ ಬಳಿ ಖುದ್ದು ಅವರೇ ಜನರ ಬಳಿ ತೆರಳಿ ಸಮಸ್ಯೆ ಆಲಿಸಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಶಿಕ್ಷಕಿಯ ಕಣ್ಣೀರು

ಜನಸ್ಪಂದನ ಕಾರ್ಯಕ್ರಮಕ್ಕೆ ಬಂದ ಶಿಕ್ಷಕಿಯೊಬ್ಬರು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ವರ್ಗಾವಣೆಗೆ ಮನವಿ ಮಾಡಿ ಕಣ್ಣೀರು ಹಾಕಿದ್ದಾರೆ. ಕ್ಯಾನ್ಸರ್​​ನಿಂದ ಬಳಲುತ್ತಿರುವ ತಾಯಿ ನೋಡಿಕೊಳ್ಳಬೇಕು. ಹೀಗಾಗಿ ವರ್ಗಾವಣೆ ಕೋರಿ ಸುಷ್ಮಾ ಮನವಿ ಮಾಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಸಿಎಂ ಜನಸ್ಪಂದನಕ್ಕೆ ವೃದ್ಧರು, ವಿಶೇಷ ಚೇತನರು ಆಗಮನ
ಸಿಎಂ ಬಳಿ ಸಹಾಯ ಕೇಳಲು ಕಾಲು ಕಳೆದುಕೊಂಡ ವ್ಯಕ್ತಿ ಬಂದಿದ್ದಾರೆ. ಚಾಮರಾಜನಗರ ಮೂಲದ ನಾಗರಾಜ್​ ಅವರು ಕುಟುಂಬ ಸಮೇತ ಜನಸ್ಪಂದನಕ್ಕೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿರುವ ನಾಗರಾಜ್ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಸದ್ಯ ಸಿಎಂ ಸಹಾಯಕ್ಕಾಗಿ ಬಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!