ನಾಯಕ ಸರಿಯಾಗಿ ಆಡಳಿತ ಮಾಡಿದರೆ ಮಾತ್ರವೇ ಆ ಭಾಗದ ಜನತೆ ಸುಖ ಸಮೃದ್ಧತೆಯಿಂದ ಇರುವುದಕ್ಕೆ ಸಾಧ್ಯ. ನಾಯಕನ ಆಡಳಿತವೇ ಸರಿಯಾಗಿಲ್ಲದಿದ್ದರೆ ಆ ಪ್ರದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಖಂಡಿತವಾಗಿಯೂ ಬೇಲೂರು ವಿಧಾನ ಸಭಾ ಕ್ಷೇತ್ರ ಅಭಿವೃದ್ಧಿಆಗಲಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
ತಾಲೂಕಿನ ಮೊಸಗಸಾವರದಲ್ಲಿ ಮತಯಾಚಿಸಿ ಮಾತನಾಡಿದ ಅವರು, ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೇಲೂರು ವಿಧಾನ ಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಒಂದು ಕಾಲದಲ್ಲಿ ಮೆರೆದ ಪ್ರದೇಶ ಈಗ ಈ ಸ್ಥಿತಿಯಲ್ಲಿರುವುದು ಶೋಚನೀಯ. ಈ ಭಾಗ ಎಲ್ಲಾ ಕ್ಷೇರಗಳಲ್ಲೂ ಅಭಿವೃದ್ಧಿ ಹೊಂದುವ ಕಾಲ ಸನಿಹದಲ್ಲಿದೆ. ನೀವೆಲ್ಲ ಈ ಬಾರಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲವನ್ನು ಸೂಚಿಸಿ ನನ್ನನ್ನು ಗೆಲ್ಲಿಸಿದರೆ ನೀವು ಗೆದ್ದಂತೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೀ ಮತ್ತು ಬಿ ವೈ ವಿಜಯೇಂದ್ರ ಅವರು ಈ ಕ್ಷೇತ್ರಕ್ಕೆ ಬಂದಾಗ ಹೆಚ್.ಕೆ ಸುರೇಶ್ ಗೆದ್ದರೆ ನಾವು ಗೆದ್ದಂತೆ ಮತ್ತು ನೀವೆಲ್ಲರೂ ಗೆದ್ದಂತೆ ಎಂದು ಹೇಳಿದ್ದರು. ಕಾಲ ಇನ್ನೂ ಮಿಂಚಿಲ್ಲ, ಭಾರತೀಯ ಜನತಾ ಪಾರ್ಟಿಗೆ ಮತ ಹಾಕುವುದರ ಮೂಲಕ ಬೇಲೂರಿನ ಹಾಗೂ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸೋಣ ಎಂದು ಹೇಳಿದರು.