Political NewsState News

ಕೇಶವಕೃಪದವರು ನೋಡಲಿ ಅಂತ ಡ್ರಾಮಾ ಮಾಡಿದ ಬಿಜೆಪಿ ಸದಸ್ಯರು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಾವು ಬಸವಣ್ಣನವರ ಸಂಸ್ಕಾರದಂತೆ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದನ್ನು ನಾಡಿನ ಜನ ಸ್ವಾಗತಿಸಿದ್ದಾರೆ, ಸಂಭ್ರಮಿಸಿದ್ದಾರೆ. ಇದನ್ನು ಬಿಜೆಪಿ ಯವರಿಗೆ ಸಹಿಸಲು ಆಗುತ್ತಿಲ್ಲ, ಸಂಕಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ವಿದಾನಸಭಾ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಸ್ಪೀಕರ್ ಮುಖಕ್ಕೆ ಪೇಪರ್ ಹರಿದು ಎಸೆದದ್ದು ಮತ್ತು ಸ್ಪೀಕರ್ ಪೀಠಕ್ಕೆ ಅವಮಾನಿಸಿದ್ದನ್ನು ವಿರೋಧಿಸಿ ಸದನದಲ್ಲಿ ಮಾತನಾಡಿದರು.

ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅತ್ಯಂತ ಬೇಸರದ ದಿನ. ನಮ್ಮ ಐದು ಗ್ಯಾರಂಟಿಗಳನ್ನು ನಾಡಿನ ಜನ‌ತೆ ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು ಬಿಜೆಪಿ ಶಾಸಕರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಥಪೂರ್ಣ ವಿರೋಧ ಪಕ್ಷ ಇರಬೇಕು ಎನ್ನುವುದು ನನ್ನ ನಂಬಿಕೆ. ಈ ಕಾರಣಕ್ಕೇ ನಾವು ಬಿಜೆಪಿ ಮುಕ್ತ ಎನ್ನುವ ಮಾತನ್ನು ಯಾವತ್ತೂ ಆಡಿಲ್ಲ. ಇವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಗೌರವ ಇಲ್ಲ.

ಅಂಬೇಡ್ಕರ್, ಬುದ್ದ, ಬಸವ ಮುಂತಾದ ಮಹನೀಯರ ಪ್ರಜಾಪ್ರಭುತ್ವವಾದಿ ಮೌಲ್ಯಗಳ ಮುಂದುವರೆದ ಪರಂಪರೆಯ ಪ್ರಾತಿನಿಧಿಕ ಸಂಸ್ಥೆಯಾಗಿದ್ದ ವಿಧಾನಸಭೆಗೆ ಅಗೌರವ ಸಲ್ಲಿಸಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಮತ್ತು ಸದನದ ನಿಯಮಾವಳಿಗಳ ಆಧಾರದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿಯವರಿಗೆ ಅವಕಾಶ ಇತ್ತು. ಆದರೆ ಸ್ಪೀಕರ್ ಮುಖಕ್ಕೆ ಪತ್ರ ಎಸೆಯುವುದು, ಸ್ಪೀಕರ್ ಪೀಠಕ್ಕೆ ಎಸೆಯುವುದು, ಅವಮಾನ ಮಾಡುವುದು ನಿಯಮ ಬಾಹಿರ. ಇದು ಅನಾಗರೀಕ ನಡವಳಿಕೆಯಲ್ಲವೇ ಎಂದು ಪ್ರಶ್ನಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲೂ ಐಎಎಸ್ ಅಧಿಕಾರಿಗಳನ್ನೇ ಲೈಸನಿಂಗ್ ಅಧಿಕಾರಿಗಳನ್ನಾಗಿ ಮಾಡಿದ್ದರು. ಆದೆಲ್ಲಾ ಅವರಿಗೆ ಮರೆತುಹೋಯ್ತಾ ? ದಿವಂಗತ ಅನಂತ್ ಕುಮಾರ್ ಅವರು ಬದುಕಿದ್ದಾಗ ರಾಜ್ಯದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಗೆ ಬರುವ ಬಿಜೆಪಿ ರಾಷ್ಟ್ರೀಯ ನಾಯಕರನ್ನು ರಾಜ್ಯದ ಅತಿಥಿಗಳನ್ನಾಗಿ ಘೋಷಿಸಿ ಆ ಶಿಷ್ಟಾಚಾರದಂತೆ ಕ್ರಮ ವಹಿಸಲು ನನ್ನ ಬಳಿ ಬಂದು ಮನವಿ ಮಾಡಿದ್ದರು. ಆಗ ನಾನು ಮುಖ್ಯಮಂತ್ರಿ ಆಗಿ ಬಿಜೆಪಿ ನಾಯಕರಿಗೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಅತಿಥಿಗಳು ಎಂದು ಘೋಷಿಸಿ ಗೌರವ ನೀಡಿದ್ದೆವು.

ಇದು ಬಿಜೆಪಿಯವರಿಗೆ ಸ್ಪಷ್ಟವಾಗಿ ಗೊತ್ತಿದ್ದೂ ಸುಳ್ಳು ಹೇಳುತ್ತಾ ನಕಲಿ ಪ್ರತಿಭಟನೆಯ ಡ್ರಾಮಾ ಮಾಡಿದ್ದಾರೆ. ಅವತ್ತು ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಯಾವ ರೀತಿ ನಡೆಸಿಕೊಂಡಿದ್ದೇವೋ ಈಗಲೂ ಅದೇ ರೀತಿ ನಡೆದುಕೊಂಡಿದ್ದೇವೆ. ಇದು ಹಿಂದಿನಿಂದ ನಡೆದುಕೊಂಡಿರುವ ಪದ್ಧತಿ. ಅದರಂತೆ ನಡೆಯುತ್ತಿದೆ. ಆದರೆ ಇವತ್ತು ಬಿಜೆಪಿ ಸದಸ್ಯರು ಅದನ್ನೆಲ್ಲಾ ಮರೆತರಂತೆ ಡ್ರಾಮಾ ಆಡುತ್ತಾ, ಅಮಾನವೀಯವಾಗಿ ವರ್ತಿಸಿದ್ದಾರೆ. ಸ್ಪೀಕರ್ ಜತೆ ಮತ್ತು ಅವರ ಪೀಠದ ಎದುರು ಅತ್ಯಂತ ಅಸಹ್ಯವಾಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ನಾವೂ ವಿರೋಧ ಪಕ್ಷದಲ್ಲಿದ್ದೆವು. ಇಷ್ಟು ಅಸಹ್ಯವಾಗಿ ನಡೆದುಕೊಂಡಿದ್ದ ಸಣ್ಣ ಉದಾಹರಣೆಯಾದರೂ ಇದೆಯೇ ಎಂದು ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!