ಬಳ್ಳಾರಿ : ಸರ್ಕಾರ ಬಾಕಿ ಬಿಲ್ ಪಾವತಿಸದ ಹಿನ್ನೆಲೆ ಬಳ್ಳಾರಿ ನಗರದಲ್ಲಿ 5 ಇಂದಿರಾ ಕ್ಯಾಂಟೀನ್‍ಗಳು ಬಂದ್ ಆಗಿದೆ.
ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈಗ ಅದೇ ಸರ್ಕಾರದ ಆಡಳಿತಾವಧಿಯಲ್ಲಿ ಅನುದಾನ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳ ಹಿಡಿದಂತಾಗಿದೆ.
ನಿರ್ವಾಹಣೆ ಪಡೆದ ಏಜೆನ್ಸಿಗಳಿಗೆ ಕಳೆದ ಮೂರು ವರ್ಷಗಳಿಂದಲೂ ಅನುದಾನವೇ ಬಿಡುಗಡೆಯಾಗಿಲ್ಲ. 2019 ಅಕ್ಟೋಬರ್‍ನಿಂದ ಈ ವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸುಮಾರು 3.38 ಕೋಟಿ ರೂ. ಬಾಕಿ ಮೊತ್ತವನ್ನ ಸರ್ಕಾರ ಇರಿಸಿಕೊಂಡಿದೆ. ಈ ಕುರಿತು ಸಾಕಷ್ಟು ಬಾರಿ ಏಜೆನ್ಸಿಗಳು ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಒಟ್ಟು ಎಂಟು ಕ್ಯಾಂಟೀನ್‍ಗಳು ಸೇರಿದಂತೆ 4.5 ಕೋಟಿ ರೂ. ಬಿಲ್ ಬಾಕಿ ಇದೆ. ಪ್ರತಿ ತಿಂಗಳ ಕ್ಯಾಂಟಿನ್ ನಿರ್ವಹಣೆಗೆ ಸುಮಾರು 10 ಲಕ್ಷ ರೂ.ಗಳಿಗೂ ಅಧಿಕ ಹಣ ವ್ಯಯಿಸಬೇಕಿದೆ. ಇದೇ ಕಾರಣಕ್ಕೆ, ಇಂದಿರಾ ಕ್ಯಾಂಟಿನ್ ನಿರ್ವಹಣೆ ವಹಿಸಿಕೊಂಡಿದ್ದ ಎಜೆನ್ಸಿಗಳು ತರಕಾರಿ, ಗ್ಯಾಸ್, ಸಿಬ್ಬಂದಿಗೂ ಕೊಡಲು ಹಣವಿಲ್ಲದೆ ಈಗ ಬಂದ್ ಮಾಡಿದ್ದಾರೆ. ನಗರದ ಮೋತಿ ಸರ್ಕಲ್, ಜಿಲ್ಲಾ ಆಸ್ಪತ್ರೆ, ಎಪಿಎಂಸಿ, ವಿಮ್ಸ್‌ನಲ್ಲಿರುವ ಐದು ಕ್ಯಾಂಟೀನ್‍ಗಳನ್ನು ಬಂದ್ ಮಾಡಲಾಗಿದೆ
ಬಂದ್ ಆಗಿರುವ ಬಳ್ಳಾರಿ ನಗರದ ಐದು ಕ್ಯಾಂಟಿನ್‍ಗಳಲ್ಲಿ ಪ್ರತಿನಿತ್ಯ ಸಾವಿರಾರು ಜನ ಮುಂಜಾನೆ ಉಪಹಾರ, ಮಧ್ಯಾಹ್ನ ಊಟ ಮಾಡುತ್ತಿದ್ದರು. ಆದಷ್ಟು ಬೇಗ ಕ್ಯಾಂಟೀನ್ ತೆರೆಯಬೇಕು ಎಂಬುದು ಜನರ ಒತ್ತಾಯವಾಗಿದೆ.