ಮೈಸೂರು : ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದ್ದಾರೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ.
ನನ್ನ ಭಯೋತ್ಪಾದಕ ಅಂತ ಬಿಂಬಿಸುವ ಪ್ರಯತ್ನ ಕಾಂಗ್ರೆಸಿಗರು ಮಾಡಿದರು. ಮುಸ್ಲಿಮರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲ್ಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು ಎಂದು ಟೀಕಿಸಿದರು.
ಮರ ಕಡಿತ ಪ್ರಕರಣದ ಬಗ್ಗೆ ಡಿ.16 ರಂದು ಎಫ್ ಐಆರ್ ಆಗಿದೆ. ಅದನ್ನು ಮೊನ್ನೆ ನನ್ನ ತಮ್ಮನ ಹೆಸರಿನಲ್ಲಿ ತಿರುಚಿದ್ದು ಯಾಕೆ? ಪ್ರತಾಪ್ ಸಿಂಹನನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ ಅಂತಾ ಸಿದ್ದರಾಮಯ್ಯ ಅವರಿಗೆ ಗೊತ್ತು. ನನ್ನ ತಮ್ಮನ ಹೆಸರು ಎಫ್ ಐಅರ್ ನಲ್ಲಿ ಇಲ್ಲ. ಆದರೂ ಅವನ ಹೆಸರು ಯಾಕೆ ತರುತ್ತಿದ್ದಾರೆ. ನನ್ನ ತಮ್ಮಂದಿರು, ತಂಗಿ ಯಾರು ಅಂತಾನೂ ಮೈಸೂರು ಜನ ನೋಡಿಲ್ಲ. ಚುನಾವಣೆ ವೇಳೆ ನನ್ನ ತಮ್ಮಂದಿರು ಒಂದು ತಿಂಗಳು ಬಂದು ಹೋಗುತ್ತಾರೆ ಅಷ್ಟೇ. ಮೈಸೂರು ಕಡೆ ಅವರು ಮತ್ತೆ ಯಾವತ್ತೂ ತಲೆ ಹಾಕಲ್ಲ ಎಂದು ಅವರು ಹೇಳಿದರು. ಯಾವ ಸಂಸದರು, ಶಾಸಕರ ಸಹೋದದರರು ಕೃಷಿ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ ಹೇಳಿ? ನನ್ನ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಮಿನಿಟ್, ಕಾಂಟ್ರಾಕ್ಟ್ , ವರ್ಗಾವಣೆ ಯಾವುದರಲ್ಲೂ ನನ್ನ ಸಹೋದರರು ಇಲ್ಲ. ಪ್ರತಾಪ್ ಸಿಂಹ ಅವಹೇಳನ ಮಾಡಬೇಕು ಅಂತಾ ಹೀಗೆ ಮಾಡುತ್ತಿದ್ದಾರೆ. ನಿಮ್ಮದೆ ಪೊಲೀಸ್ ಇಲಾಖೆ, ನಿಮ್ಮದೆ ಸರ್ಕಾರ ಇದೆ ತನಿಖೆ ಮಾಡಿ ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಗೆ ನನ್ನ ಮೇಲೆ ಯಾಕೆ ದ್ವೇಷ? ಬಡವರ ಮಕ್ಕಳು ರಾಜಕಾರಣ ಮಾಡಬಾರದಾ? 9 ವರ್ಷದಲ್ಲಿ ನಾನು ಏನ್ ಕೆಲಸ ಮಾಡಿದ್ದೇನೆ ಸಿದ್ದರಾಮಯ್ಯ ಅವರು 40 ವರ್ಷದಲ್ಲಿ ಏನ್ ಮಾಡಿದ್ದಾರೆ ಹೇಳಲಿ. ನೀನು ಗೌಡ, ಕುರುಬ, ನೀನು ಲಿಂಗಾಯತ ಅಂತಾ ನಾನು ಅವರ ರೀತಿ ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾತ್ರ ನಾನು ಮಾಡುವುದು. ನಿರಂತರವಾಗಿ ನನ್ನ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ನಾನು ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತು ಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೆಟ್ ಎಂದು ಅವರು ಮಾರ್ಮಿಕವಾಗಿ ಹೇಳಿದರು.