ರಾಮನಗರ : ಬರ ಪರಿಹಾರ ಕೇಳಿದ ರೈತನ ಮೇಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಗರಂ ಆಗಿದ್ದಾರೆ. ಮಾಗಡಿ ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಬರ ಪರಿಹಾರದ ಕುರಿತ ಸದನದಲ್ಲಿ ಚರ್ಚೆ ಮಾಡಿ ಹೆಚ್ಚಿನ ಪರಿಹಾರ ಕೊಡಿಸಿ ಎಂದು ರೈತ ಹೇಳಿದ್ದಕ್ಕೆ ಸುರೇಶ್ ಸಿಟ್ಟಾಗಿದ್ದಾರೆ.
ಸರ್ಕಾರ 5 ಕೆ.ಜಿ ಅಕ್ಕಿ ಕೊಡುತ್ತಿದೆ. ಇನ್ನುಳಿದ 5 ಕೆಜಿಗೆ ಹಣ ಕೊಡುತ್ತಿದೆ. ರೈತರ ಪಂಪ್ ಸೆಟ್‌ಗೆ ವಿದ್ಯುತ್ ಖರೀದಿ ಮಾಡುತ್ತಿದೆ. ನಾವು ಪ್ರತಿ ದಿನ ಬೆಳಗ್ಗೆ ಜೆಡಿಎಸ್, ಬಿಜೆಪಿಯವರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೇವೆ. ನೀನಿನ್ನೂ ಅದು ಕೊಡಿ, ಇದು ಕೊಡಿ ಅಂತಿದ್ದೀಯಾ. ನೀನು ಎಷ್ಟು ಟ್ಯಾಕ್ಸ್ ಕಟ್ಟುತ್ತಿದ್ದೀಯ ಹೇಳು? ನೀನು ಟ್ಯಾಕ್ಸ್ ಕಟ್ಟುವುದಿಲ್ಲ ಎಂದು ಗರಂ ಆದರು.
ತೆರಿಗೆ ಕಟ್ಟದವರಿಗೆ ಯಾಕೆ ಉಚಿತ ನೀಡಬೇಕು ಎಂದು ಮೋದಿ ಕೇಳುತ್ತಿದ್ದಾರೆ. ಮೋದಿ ಯಾರ ಹತ್ತಿರವೂ ಮಾತನಾಡುವುದಿಲ್ಲ. ಅವರು ಹೇಳಿದನ್ನು ನೀನು ಕೇಳಿಕೊಳ್ಳಬೇಕು. ನಿನಗೆ ಮೋದಿಯೇ ಸರಿ ಅಂದರೆ ನಾನು ಏನು ಮಾಡಲು ಆಗುತ್ತೆ? ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಬೇಡಿಕೆಯನ್ನು ಇಡಬೇಕು ಎಂದರು.
ಎಲ್ಲರಿಗೂ ಆಸೆ ಇದೆ, ಏನು ಕೊಟ್ಟರೂ ಸಾಲುವುದಿಲ್ಲ. ಸರ್ಕಾರಿ ನೌಕರರಿಗೂ ಸಮಾಧಾನ ಇಲ್ಲ. ಪಂಚಾಯತ್ ಸದಸ್ಯರು, ಶಾಸಕರು ಸಮಾಧಾನವಾಗಿಲ್ಲ. ಬೆಳಗ್ಗೆ ಎದ್ದು ಯಾರು ದುಡಿಮೆ ಮಾಡುತ್ತಾನೋ ಅವನೇ ಸಮಾಧಾನವಾಗಿದ್ದಾನೆ. ಇವತ್ತಿನ ಪರಿಸ್ಥಿತಿ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ನೀನು ನೆಮ್ಮದಿಯಾಗಿಲ್ಲ, ನಿನಗೆ ದಿನವೂ ಆಸೆ ಜಾಸ್ತಿ ಆಗುತ್ತಿದೆ ಎಂದು ಕಿಡಿಕಾರಿದರು.