ಬೆಂಗಳೂರು : ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್‍ರನ್ನು ಮುಂದುವರಿಸುವ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಜನವರಿ 31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಮುಕ್ತಾಯವಾಗಲಿದೆ.
ಕಳೆದ ಬಾರಿ ಅವಧಿ ಮುಕ್ತಾಯ ಬಳಿಕ ಜನರ ಒತ್ತಾಯ ಕೇಳಿ ಬಂದ ಹಿನ್ನೆಲೆ 6 ತಿಂಗಳ ಕಾಲ ಹುದ್ದೆಯಲ್ಲಿ ಸರ್ಕಾರ ಮುಂದುವರಿಸಿತ್ತು. ಎನ್‍ಎಂಸಿ ಆಕ್ಟ್ ಪ್ರಕಾರ 70 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿದೆ. ಡಾ. ಮಂಜುನಾಥ್ ಅವರಿಗೆ 67 ವರ್ಷವಾಗಿದ್ದು, ಇನ್ನು 3 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ. ಆದರೆ ಸರ್ಕಾರ ಮುಂದುವರಿಸುವ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಜನವರಿ 31ಕ್ಕೆ ಡಾ. ಮಂಜುನಾಥ್ ನಿವೃತ್ತಿ ಘೋಷಣೆ ಮಾಡಲಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದ್ದು, 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಮೈಸೂರು ಮೂಲದ ಸಿಎಂ ಆಪ್ತರಿಗೆ ನಿರ್ದೇಶಕರ ಹುದ್ದೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.
ಚುನಾವಣೆಗೆ ಸ್ಪರ್ಧಿಸ್ತಾರೆ ಎಂಬ ಚರ್ಚೆ ಜೋರಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್ ಅವರು, ಆ ರೀತಿ ಏನಿಲ್ಲ ಚುನಾವಣೆಗೆ ನಿಲ್ಲೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.