ಹುಬ್ಬಳ್ಳಿ : ಇತ್ತೀಚಿಗೆ ನಡೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ಆಗುವಕ್ಕಿಂತಲೂ ಮೊದಲೇ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಕೆಎಸ್ ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಮೂಲಕ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಣ ತೊಟ್ಟಿದ್ದಾರೆ.
ಹೀಗಾಗಿ ಕೆಎಸ್ ಈಶ್ವರಪ್ಪ ಕೇಂದ್ರ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ ಧಿಡೀರನೆ ಹುಬ್ಬಳ್ಳಿಯ ಮಯೂರಾ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಕೆ ಎಸ್ ಈಶ್ವರಪ್ಪ ಭೇಟಿ ನೀಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಎಸ್ ಈಶ್ವರಪ್ಪ ಭೇಟಿ ಕುತೂಹಲ ಕೆರಳಿಸಿದೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ನಾವಿಬ್ಬರೂ ಒಂದೇ ಪಕ್ಷದವರು ಏನಿಲ್ಲ ಬಿಡಿ. ಈಶ್ವರಪ್ಪ ಬಂದರೇ ಸುದ್ದಿ ಸಿಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಭೇಟಿ ವೇಳೆ ಕೆಎಸ್ ಈಶ್ವರಪ್ಪ ಪ್ರಹ್ಲಾದ್ ಜೋಶಿ ಕಾಲಿಗೆ ನಮಸ್ಕರಿಸಲು ಮುಂದಾದರು. ಆಗ ಪ್ರಹ್ಲಾದ್ ಜೋಶಿ ನಯವಾಗಿ ತಿರಸ್ಕರಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಧಾನಿ ಮೋದಿ ಮತ್ತು ಚುನಾವಣಾ ಚಾಣಕ್ಯ ಅಮಿತ್ ಶಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿ ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಶುಕ್ರವಾರ ದಾವಣಗೆರೆ ಪ್ರವಾಸ ಮುಗಿಸಿ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಗೆ ಬಂದಿದ್ದಾರೆ.