State News

ಅಂಜನಾದ್ರಿಯಲ್ಲಿ ಯಶಸ್ವಿಯಾಗಿ ನೆರವೇರಿದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ …

ಕೊಪ್ಪಳ : ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ಎರಡು ದಿನಗಳ ಕಾಲ ಜಿಲ್ಲಾಡಳಿತವು ಆಯೋಜನೆ ಮಾಡಿದ್ದ ಹನುಮಮಾಲಾ ಕಾರ್ಯಕ್ರಮಕ್ಕೆ ಡಿಸೆಂಬರ್ 24ರಂದು ತೆರೆ ಬಿದ್ದಿತು. ಡಿಸೆಂಬರ್ 24ರ ರಾತ್ರಿ ವೇಳೆವರೆಗೂ ಭಕ್ತರು ಬೆಟ್ಟವೇರಿ ಆಂಜನೇಯ ಸ್ವಾಮಿ ದರ್ಶನ ಪಡೆದು ಮರಳುತ್ತಿರುವುದು ಕಂಡು ಬಂದಿತು.

ಪ್ರಸಾದ ಸೇವೆ ಸೇರಿದಂತೆ ಎಲ್ಲಾ ವ್ಯವಸ್ಥೆ ಜಿಲ್ಲಾಡಳಿತದಿಂದ ರಾತ್ರಿವರೆಗೂ ಮುಂದುವರೆದಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಕೊನೆಯ ದಿನವೂ ರಾತ್ರಿವರೆಗೂ ಕಾರ್ಯಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಿದರು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸ್ಥಳೀಯ ಆಡಳಿತ, ತಾಲೂಕಾಡಳಿತ ಮತ್ತು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದರಿಂದ ಈ ಬಾರಿಯ ಹನುಮಮಾಲಾ ಕಾರ್ಯಕ್ರಮ ಕೆಲವು ವಿಶೇಷತೆಗಳ ಮೂಲಕ ಯಶಸ್ಸು ಕಂಡಿತು. ಈ ಬಾರಿಯ ಹನುಮಮಾಲಾ ಕಾರ್ಯಕ್ರಮದಲ್ಲಿ ಬೆಟ್ಟದ ಮೇಲಿನ ಶ್ರೀ ಆಂಜನೇಯ ಸ್ವಾಮಿ ದೇವರ ದರ್ಶನಕ್ಕೆ ವಿವಿಧೆಡೆ ನೇರ ಪ್ರದರ್ಶನಕ್ಕೆ ಜಿಲ್ಲಾಡಳಿತವು ಏರ್ಪಾಡು ಮಾಡಿದ್ದರಿಂದ ವಯೋವೃದ್ಧರು, ವಿಕಲಚೇತನರು, ಮಕ್ಕಳು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಜನರು ಹನುಮ ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

ಮುಖ್ಯವಾಗಿ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಂಗಭದ್ರಾ ನದಿ ತಟದಲ್ಲಿನ ಬೆಟ್ಟದ ಮೇಲಿದ್ದರಿಂದ ಭಕ್ತರಿಗೆ ವಿಶೇಷ ಆಕರ್ಷಣೆಯಾಗಿದೆ. ಭಕ್ತರ ಸಂತಸವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಈ ಭಾರಿ ಬೆಟ್ಟದ ಸುತ್ತಲೂ ಬಗೆಬಗೆಯ ಬಣ್ಣದ ವಿದ್ಯೂದೀಪಗಳ ಅಲಂಕಾರ ಮಾಡಿದ್ದರಿಂದ ಅಂಜನಾದ್ರಿ ಬೆಟ್ಟವು ಮನಮೋಕವಾಗಿ ಕಂಡು ಬಂದು ಹನುಮ ಭಕ್ತರ ಮನ ತಣಿಸಿತು. ಯೋಜಿತವಾಗಿ ಕಾರ್ಯಕ್ರಮ ರೂಪಿಸಿದ್ದರಿಂದ ಅಲ್ಲಲ್ಲಿ ಸ್ನಾನಗೃಹಗಳು ಮತ್ತು ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದರಿಂದ ಮತ್ತು ಪ್ರಸಾದ ಕೊಡುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಮತ್ತು ಕೌಂಟರಗಳನ್ನು ಅಳವಡಿಸಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಜನಸಂದಣಿಯಾಗಿದಂತೆ ಆಯಾ ಕಡೆಗಳಲ್ಲಿ ಸ್ನಾನ ಮಾಡಲು, ದರ್ಶನ ಪಡೆಯಲು ಮತ್ತು ಕುಡಿಯುವ ನೀರು, ಪ್ರಸಾದ ಪಡೆಯಲು ನೂಕುನುಗ್ಗಲು ಆಗಲಿಲ್ಲ. ಕಾರ್ಯಕ್ರಮದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆಯು ವಿಶೇಷ ಯೋಜನೆ ರೂಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಭಕ್ತರಿಗೆ ಅನುಕೂಲವಾಗುವಂತೆ ಆರೋಗ್ಯ ಇಲಾಖೆಯಿಂದ ಅಲ್ಲಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಗಂಗಾವತಿ ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸಹಾಯವಾಣಿ ಕೇಂದ್ರಗಳನ್ನು ತೆರದಿದ್ದರಿಂದ ನಾನಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅನಕೂಲವಾಯಿತು. ಹನುಮಮಾಲಾಧಾರಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರೇಳು ಬಸ್‌ಗಳಿಂದ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಹನುಮ ಮಾಲಾಧಾರಿಗಳ ಆರೋಗ್ಯದ ಮೇಲೆ ವಿಶೇಷ ನಿಗಾವಹಿಸಲು ವೇದಪಾಠಶಾಲೆಯ ಬಳಿಯಲ್ಲಿ ಹಾಗೂ ಇನ್ನೀತರ ಕಡೆಗಳಲ್ಲಿ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಅಲ್ಲಿ ಔಷಧಿ, ಗುಳಿಗೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಮಳಿಗೆಯಲ್ಲಿ ಆರೋಗ್ಯ ಯೋಜನೆಗಳ ಪೋಸ್ಟರಗಳನ್ನು ಅಳವಡಿಸಿ ಆರೋಗ್ಯ ಶಿಕ್ಷಣ ನೀಡಿದ್ದು ವಿಶೇಷವಾಗಿತ್ತು.

ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಆರೋಗ್ಯ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಕ್ಷಯ ಹಾಗೂ ಕುಷ್ಟರೋಗ ನಿಯಂತ್ರಣಕ್ಕಾಗಿ ಆರೋಗ್ಯ ವಾಹಿನಿಗಳಿಂದ ಆರೋಗ್ಯ ಜಾಗೃತಿಯ ಸಂದೇಶ ರವಾನಿಸಿದ್ದು ವಿಶೇಷವಾಗಿತ್ತು. ತಾಲೂಕು ಆರೋಗ್ಯ ಇಲಾಖೆಯು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ರೆಡ್ ಕ್ರಾಸ್ ಸಂಸ್ಥೆ ಮತ್ತು ಇನ್ನೀತರ ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಸಿತು. ಡಿಸೆಂಬರ್ 23ರಂದು 27 ಜನರು ಡಿಸೆಂಬರ್ 24ರಂದು 40ಕ್ಕೂ ಹೆಚ್ಚು ಹನುಮಮಾಲಾಧಾರಿಗಳು ಮತ್ತು ಸಾರ್ವಜನಿಕರು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಹನುಮ ಭಕ್ತರೊಂದಿಗೆ ಸಚಿವರು, ಶಾಸಕರು: ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಹಾಗೂ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಡಿಸೆಂಬರ್ 24ರಂದು ಅಂಜನಾದ್ರಿಗೆ ಭೇಟಿ ನೀಡಿ ಹನುಮ ಮಾಲಾಧಾರಿಗಳೊಂದಿಗೆ ಕೆಲಹೊತ್ತು ಕಳೆದರು. ಕಾರ್ಯಕ್ರಮವು ಶಿಸ್ತಿನಿಂದ ನಡೆದಿರುವುದು ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮವನ್ನು ಸಚಿವರು ಮತ್ತು ಶಾಸಕರು ಇದೆ ವೇಳೆ ಸ್ಮರಿಸಿದರು. ಇಡೀ ದಿನ ಮೇಲ್ವಿಚಾರಣೆ; ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಡಿಸೆಂಬರ್ 24ರಂದು ಸಹ ಇಡೀ ದಿನ ಅಂಜನಾದ್ರಿಯಲ್ಲಿದ್ದು ಕಾರ್ಯಕ್ರಮ ಮೇಲುಸ್ತುವಾರಿಯನ್ನು ನೋಡಿಕೊಂಡರು.

ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಮತ್ತು ಸಿದ್ದಲಿಂಗಪ್ಪಗೌಡ, ತಹಸೀಲ್ದಾರರಾದ ವಿಶ್ವನಾಥ ಮುರಡಿ, ಶೃತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿದೇವಿ, ಗಂಗಾವತಿಯ ಪೌರಾಯುಕ್ತರು ಸೇರಿದಂತೆ ಕಂದಾಯ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲರೂ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು. ಭಕ್ತರ ಜೊತೆ ಊಟ ಸವಿದರು.

ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಹೆಚ್ಚಿನ ಸಮಯ ವೇದಪಾಠಶಾಲೆಯಲ್ಲಿದ್ದು ಪ್ರಸಾದ ವಿತರಣೆಯಲ್ಲಿ ತೊಂದರೆಯಾಗದಂತೆ ಮೇಲುಸ್ತುವಾರಿ ವಹಿಸಿದರು. ಇದೆ ಸಮಯದಲ್ಲಿ ಹನುಮ ಭಕ್ತರ ಸಮ್ಮುಖದಲ್ಲಿ ಪ್ರಸಾದ ಸೇವಿಸಿದರು. ಬೆಟ್ಟ ಏರಿದ ಅಧಿಕಾರಿಗಳು: ಹನುಮಮಾಲಾ ಕಾರ್ಯಕ್ರಮದ ಕೇಂದ್ರ ಸ್ಥಳವಾದ ಪಾದಗಟ್ಟೆಯ ಹತ್ತಿರ ತೆರೆಯಲಾಗಿದ್ದ ಕಂಟ್ರೋಲ್ ರೂಮ್ ಬಳಿಯಲ್ಲಿ ಸಹ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಮತ್ತು ಸಹಾಯಕ ಆಯುಕ್ತರು ಕುಳಿತು ಸಿಸಿಟಿವಿ ವೀಕ್ಷಣೆ ನಡೆಸಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಂಜೆ ವೇಳೆ ಅಧಿಕಾರಿಗಳ ತಂಡವು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವದಲ್ಲಿ ಬೆಟ್ಟ ಏರಿ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!